ಮುಂಬೈ: ಲಾಕ್‌ಡೌನ್‌ಗೆ ತತ್ತರಿಸಿದ ಕರಾವಳಿ ಹೊಟೇಲ್ ಉದ್ಯಮ

Update: 2021-04-09 10:22 GMT

ಉದ್ಯಮಿಗಳು, ಕಾರ್ಮಿಕರಿಂದ ಧರಣಿ ಪರವಾನಿಗೆಗಳಿಗೆ ದುಡ್ಡ ಕಟ್ಟಲು ಒತ್ತಡ ಹೇರಿ, ಇದೀಗ ಅನಿರೀಕ್ಷಿತ ಲಾಕ್‌ಡೌನ್; ಹೊಟೇಲ್ ಉದ್ಯಮಿಗಳಿಂದ ವ್ಯಾಪಕ ಆಕ್ರೋಶ

ಮುಂಬೈ, ಎ.8: ಮುಂಬೈಯ ಬಾಂದ್ರಾದಲ್ಲಿನ ಪ್ರಸಿದ್ಧ ಕೃಷ್ಣ ಸಾಗರ್ ಹೊಟೇಲ್‌ನ ಮಾಲಕ, ಕುಂದಾಪುರ ಮೂಲದ ನಾಗೇಶ್ ಕುಂದರ್(48) ಅವರು ಆತ್ಮಹತ್ಯೆಗೈ ಯುವುದರೊಂದಿಗೆ ಮುಂಬೈ ಲಾಕ್‌ಡೌನ್‌ನ ತತ್ತರಕ್ಕೆ ಆತ್ಮಹತ್ಯೆಗೈದ ಕರಾವಳಿಯ ಹೊಟೇಲ್ ಉದ್ಯಮಿ, ಕಾರ್ಮಿಕರ ಸಂಖ್ಯೆ 16ಕ್ಕೇರಿದೆ. ಕುಂದರ್ ಅವರು ಎಪ್ರಿಲ್ 6ರಂದು ಆತ್ಮಹತ್ಯೆಗೈದಿದ್ದು, ಇದು ಹೊಟೇಲ್ ಉದ್ಯಮವನ್ನು ಇನ್ನಷ್ಟು ಆತಂಕಗಳಿಗೆ ತಳ್ಳಿದೆ. ಮಾರ್ಚ್ 31ಕ್ಕೆ ಮೊದಲು ಹೊಟೇಲ್ ಪರವಾನಿಗೆಯನ್ನು ನವೀಕರಿಸಬೇಕು ಎಂಬ ಸರಕಾರದ ಒತ್ತಡಕ್ಕೆ ಬಲಿಯಾಗಿ ಹಲವು ಉದ್ಯಮಿಗಳು 2021-22ರ ಮುಂಗಡ ಲೈಸನ್ಸ್‌ಗಾಗಿ ಅಪಾರ ಹಣವನ್ನು ಪಾವತಿ ಮಾಡಿದ್ದಾರೆ. ಆದರೆ ಎಪ್ರಿಲ್ 5ರಂದು ಮಹಾರಾಷ್ಟ್ರ ಸರಕಾರ ಮತ್ತೆ ದಿಢೀರ್ ಲಾಕ್‌ಡೌನ್ ವಿಧಿಸಲು ತೀರ್ಮಾನಿಸಿರುವುದು ಹೊಟೇಲ್ ಉದ್ಯಮಿಗಳನ್ನು ಕಂಗಾಲು ಮಾಡಿದೆ. ಕಳೆದ ಒಂದು ವರ್ಷದಿಂದ ಮುಂಬೈ ಹೊಟೇಲ್ ಉದ್ಯಮ ವ್ಯವಹಾರವಿಲ್ಲದೆ ಕಂಗೆಟ್ಟಿದ್ದು, ಇದೀಗ ಇನ್ನೇನು ಹೊಟೇಲ್ ತೆರೆಯಬೇಕು ಎನ್ನುವಷ್ಟರಲ್ಲಿ ಸರಕಾರ ತಳೆದ ನಿರ್ಧಾರ ಹೊಟೇಲ್ ಉದ್ಯಮಿಗಳನ್ನು ಮತ್ತು ಕಾರ್ಮಿಕರನ್ನು ಬೀದಿಗೆ ಬೀಳುವಂತೆ ಮಾಡಿದೆ. ಸರಕಾರದ ಈ ನಿರ್ಧಾರವನ್ನು ಪ್ರತಿಭಟಿಸಿ, ಹೊಟೇಲ್ ಉದ್ಯಮಿಗಳು ಮತ್ತು ಕಾರ್ಮಿಕರು ಧರಣಿಗೆ ಇಳಿದಿದ್ದಾರೆ. ನಿನ್ನೆಯಷ್ಟೇ ಹೊಟೇಲ್ ಸಂಘಟನೆಯೊಂದು ಡಿಸಿಎಂ ಅಜಿತ್ ಪವಾರ್ ಜೊತೆಗೆ ಮಾತುಕತೆ ನಡೆಸಿದ್ದು, ಅವರು ಸಚಿವರು ಯಾವುದೇ ಸ್ಪಂದನೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ‘‘ನಿರ್ಣಯ ಕೈಗೊಳ್ಳುವ ಸರಕಾರಕ್ಕೆ ನಿಜವಾಗಿಯೂ ಏನಾಗುತ್ತಿದೆ ಎಂಬ ಅರಿವೂ ಇಲ್ಲ. ಹೊಟೇಲಿಗರಿಂದ ಎಲ್ಲಾ ರೀತಿಯ ಲೈಸನ್ಸ್‌ಗಳ ಜೊತೆ, ಬೋರ್ಡ್ ಲೈಸನ್ಸ್, ಅದಕ್ಕೆ ಲೈಟ್ ಹಾಕಬೇಕಾದರೆ ಇನ್ನೊಂದು ಪರವಾನಿಗೆ, ಹೀಗೆ ಬೇರೆ ಬೇರೆ ಪರವಾನಿಗೆಗಳ ಹೆಸರಲ್ಲಿ ಸುಲಿದಿದೆ. ಜಿಎಸ್‌ಟಿ ಮತ್ತು ವ್ಯಾಟ್ ಕೂಡ ಹೊಟೇಲ್ ಉದ್ಯಮದ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ಜಿಎಸ್‌ಟಿಯನ್ನು ನಾವು ಗ್ರಾಹಕರಿಂದ ಪಡೆದರೂ, ನಮ್ಮಂತಹ ಮಧ್ಯಮ ವರ್ಗದ ಹೊಟೇಲಿಗರು ವ್ಯಾಟ್ ರೂಪವಾಗಿ ತಿಂಗಳಿಗೆ ಕನಿಷ್ಠ 25,000ದಿಂದ 30,000 ರೂಪಾಯಿಯವರೆಗೆ ಸರಕಾರದ ಬೊಕ್ಕಸಕ್ಕೆ ನೀಡುತ್ತೇವೆ. ಇದೀಗ ಪರವಾನಿಗೆಗಳನ್ನು ಮಾಡಿಸಿಕೊಂಡರೂ, ಹೊಟೇಲ್ ನಡೆಸಲು ಸರಕಾರ ಅವಕಾಶ ನೀಡದೇ ಇರುವುದು ಉದ್ಯಮಕ್ಕೆ ಆಘಾತವನ್ನು ಒಡ್ಡಿದೆ’’ ಎಂದು ಹೊಟೇಲ್ ಉದ್ಯಮಿ ರವೀಂದ್ರ ಶೆಟ್ಟಿ ಇನ್ನಾ ಅಳಲು ತೋಡಿಕೊಂಡಿದ್ದಾರೆ.

ಇನ್ನೋರ್ವ ಹಿರಿಯ ಹೊಟೇಲ್ ಉದ್ಯಮಿ ಶೇಖರ್ ಆರ್. ಶೆಟ್ಟಿ ‘ವಾರ್ತಾಭಾರತಿ’ಯೊಂದಿಗೆ ಮಾತನಾಡುತ್ತಾ ‘‘ಹೊಟೇಲ್ ಉದ್ಯಮ ಒಂದು ಹಂತಕ್ಕೆ ಬರುತ್ತದೆ ಎನ್ನುವಷ್ಟರಲ್ಲಿ ಲಾಕ್‌ಡೌನ್ ಹೇರಲಾಗಿದೆ. ಈಗ ಕೇವಲ ಪಾರ್ಸೆಲ್ ವ್ಯವಸ್ಥೆ ಇದೆ. ಇದರಲ್ಲಿ ಶೇ.15ರಷ್ಟು ವ್ಯವಹಾರವೂ ಆಗುತ್ತಿಲ್ಲ’’ ಎಂದು ಸಂಕಟ ವ್ಯಕ್ತಪಡಿಸಿದ್ದಾರೆ. ಸುಮಾರು 45 ವರ್ಷಗಳಿಂದ ಹೊಟೇಲ್ ಉದ್ದಿಮೆಯಲ್ಲಿರುವ, ಬರಹಗಾರರೂ ಆಗಿರುವ ಬಾಬು ಶಿವ ಪೂಜಾರಿ ಮಾತನಾಡುತ್ತಾ ‘‘ನಮ್ಮಲ್ಲಿದ್ದ 35 ಕಾರ್ಮಿಕರ ಪೈಕಿ ಕಿಚನ್ ಮತ್ತು ಡೆಲಿವರಿ ಸಿಬ್ಬಂದಿ ಬಿಟ್ಟು ಉಳಿದ ಸುಮಾರು 20 ಕಾರ್ಮಿಕರು ಈಗಾಗಲೇ ತಮ್ಮ ಊರಿಗೆ ತೆರಳಿದ್ದಾರೆ. ಈಗ ಇರುವವರೂ ಎಷ್ಟು ದಿನ ಇರುತ್ತಾರೆ ಎನ್ನುವ ಭರವಸೆಯಿಲ್ಲ. ಮೊದಲಿದ್ದಂತೆ ಇಂದು ನಮ್ಮೂರ ಕಾರ್ಮಿಕರು ಸಿಗುತ್ತಿಲ್ಲ. ಉತ್ತರಪ್ರದೇಶ, ಉತ್ತರಾಖಂಡ, ಒಡಿಶಾ, ಬಿಹಾರಗಳಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ. ಆದರೆ ಇವರು ಅನನುಭವಿಗಳು ಮಾತ್ರವಲ್ಲ, ಹೆಚ್ಚುದಿನ ಉಳಿಯುತ್ತಲೂ ಇಲ್ಲ. ಲಾಕ್‌ಡೌನ್‌ನಿಂದಾಗಿ ಹೊಟೇಲ್ ಉದ್ಯಮ ಭವಿಷ್ಯವನ್ನು ಸಂಪೂರ್ಣ ಕಳೆದುಕೊಂಡಿದೆ’’ ಎಂದು ವಿವರಿಸುತ್ತಾರೆ.

ಯುವ ಹೊಟೇಲ್ ಉದ್ಯಮಿ ಮನೋಹರ ಶೆಟ್ಟಿ ನಂದಳಿಕೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ‘‘ನಾವು ಹೊಟೇಲಿನ ಎಲ್ಲಾ ಲೈಸನ್ಸ್ ದರಗಳನ್ನು ಮುಂಗಡವಾಗಿಯೇ ಕಟ್ಟುತ್ತೇವೆ. ಕಳೆದ ಲಾಕ್‌ಡೌನ್‌ನಿಂದಾಗಿ ಸುಮಾರು ನಾಲ್ಕು ಲಕ್ಷ ರೂ. ವೆಚ್ಚ ಮಾಡಿ ಹೊಟೇಲ್‌ನ್ನು ದುರಸ್ತಿ ಮಾಡಬೇಕಾಗಿ ಬಂತು. ಯಾವುದೇ ಮುನ್ಸೂಚನೆಯಿಲ್ಲದೆ ವಿಧಿಸಲಾದ ಲಾಕ್‌ಡೌನ್ ಆಗಿರುವುದರಿಂದ ಲಕ್ಷಗಟ್ಟಲೆ ಬೆಲೆಬಾಳುವ ಕಚ್ಚಾ ವಸ್ತುಗಳನ್ನು ಚರಂಡಿಗೆ ಎಸೆದಿದ್ದೇವೆ. ನಮ್ಮಲ್ಲಿ ಸಂಗ್ರಹವಿದ್ದ ಎಣ್ಣೆ, ಬಾಸ್ಮತಿ ಅಕ್ಕಿ, ದಾಲ್, ಕೋಳಿ ಮಾಂಸ, ಮೀನು ಎಲ್ಲವೂ ಚರಂಡಿ ಪಾಲಾದವು. ಹೊಟೇಲ್ ಉದ್ಯಮ ಸ್ಥಗಿತಗೊಂಡಿರುವುದರಿಂದ ಇದರ ಜೊತೆಗೆ ಸಂಬಂಧವನ್ನು ಹೊಂದಿರುವ ಇತರ ಉದ್ಯಮಗಳೂ ಸ್ಥಗಿತಗೊಂಡಿವೆ’’ ಎಂದು ಹೇಳುತ್ತಾರೆ.

ಪರ್ಮಿಟ್ ರೂಂ ಹೊಟೇಲಿಗರು ಸುಮಾರು 7 ಲಕ್ಷ ರೂ. ಮೊತ್ತವನ್ನು ಲೈಸನ್ಸ್ ರೂಪದಲ್ಲಿ ಕಟ್ಟಬೇಕು. ಮುಂದೆ ಆರೋಗ್ಯ, ಆಹಾರ ಸಹಿತ ಸುಮಾರು 12 ಇತರ ಲೈಸನ್ಸ್‌ಗಳನ್ನು ಪಡೆಯಬೇಕು. ಆದರೆ ಈ ಎಲ್ಲವೂ ಪಡೆದ ಬಳಿಕವೂ ಹೊಟೇಲ್ ಉದ್ಯಮ ನಡೆಸುವುದಕ್ಕೆ ಸರಕಾರವೇ ಅಡ್ಡಗಾಲು ಹಾಕುತ್ತಿದೆ.

ನವೀನ್ ಶೆಟ್ಟಿ, ಹೊಟೇಲ್ ಉದ್ಯಮಿ

ಪರಿಸ್ಥಿತಿಯನ್ನು ಎದುರಿಸಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ. ನಾವು ಈಗಾಗಲೇ ಮುಂಬೈಯ ಹಾಗೂ ಮಹಾರಾಷ್ಟ್ರದ ಒಟ್ಟು ಹೊಟೇಲು ಸಂಘಟನೆಗಳ ಜೊತೆ ಮಾತನಾಡಿದ್ದೇವೆ. ಅದರ ಪರಿಣಾಮವಾಗಿ ‘ಯುನೈಟೆಡ್ ಹಾಸ್ಪಿಟಾಲಿಟಿ ಪೋರಂ ಆಫ್ ಮಹಾರಾಷ್ಟ್ರ’ ಅಸ್ತಿತ್ವಕ್ಕೆ ಬಂದಿದೆ. ಇದರ ಮೂಲಕ ಪರಿಸ್ಥಿತಿಯನ್ನು ಮುಖ್ಯಮಂತ್ರಿಯವರಿಗೆ ತಲುಪಿಸಿದ್ದೇವೆ. ಇಂದು ಎಲ್ಲೆಡೆ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಮಾತುಕತೆ ಮತ್ತು ಪ್ರತಿಭಟನೆ ಯಶಸ್ವಿಯಾಗದಿದ್ದರೆ ನ್ಯಾಯಾಲಯವೇ ಮೂರನೇ ಸಾಧ್ಯತೆಯಾಗಿ ಕಾಣುತ್ತದೆ. ಪೂರ್ವಸೂಚನೆಯಿಲ್ಲದ ಲಾಕ್‌ಡೌನ್ ಖಂಡನೀಯ. ಟ್ರೈನ್, ಬಸ್, ಅಂಗಡಿ ಎಲ್ಲಾ ಕಡೆ ನೂಕು ನುಗ್ಗಲು ಇರುವಾಗ ಹೊಟೇಲಿಗೇಕೆ ಈ ನಿರ್ಬಂಧ? ನಮ್ಮ ಸಾಲದ ಕಂತು, ಕಾರ್ಮಿಕರ ಸಂಬಳ, ದಿನನಿತ್ಯದ ಹೊಟೇಲಿನ ಖರ್ಚು ಇವೆಲ್ಲವೂ ನಮಗೆ ಬಹುದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಪರವಾನಿಗೆಯ ದುಡ್ಡನ್ನು ಕಂತಿನಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಸರಕಾರ ಅದಕ್ಕೆ ಸ್ಪಂದಿಸಿಲ್ಲ.

ಶಿವಾನಂದ ಶೆಟ್ಟಿ, ಅಧ್ಯಕ್ಷ, ಹೊಟೇಲ್ ಉದ್ಯಮಿಗಳ ಸಂಘಟನೆ ‘ಆಹಾರ್’

Writer - ಸಾ.ದಯಾ, ಮುಂಬೈ

contributor

Editor - ಸಾ.ದಯಾ, ಮುಂಬೈ

contributor

Similar News