ಬೀದಿಗೆ ಬಿದ್ದ ಬಡ ಕಿಡ್ನಿರೋಗಿಗಳ ಬದುಕು

Update: 2021-04-09 10:21 GMT

► ಮೊದಲಿನ ವ್ಯವಸ್ಥೆ ಜಾರಿಗೆ ಒತ್ತಾಯ

► ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಡಯಾಲಿಸಿಸ್ ಯಂತ್ರ ಅಳವಡಿಕೆಗೆ ಆಗ್ರಹ

ಫರಂಗಿಪೇಟೆ, ಎ.8: ರಾಜ್ಯ ಸರಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಮೂತ್ರ ಪಿಂಡ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಮಾಡುತ್ತಿದ್ದ ಶುಲ್ಕ ರಹಿತ ಡಯಾಲಿಸಿಸ್ ಅನ್ನು ಸರಕಾರ ದಿಢೀರ್ ರದ್ದುಗೊಳಿಸಿದ್ದು, ಮೂತ್ರ ಪಿಂಡ ರೋಗಿಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.

  ಕೋವಿಡ್ ಸಂದರ್ಭ ಸರಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿದ್ದರಿಂದ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡುತ್ತಿದ್ದ ರೋಗಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾರ್ಚ್ 9ರಿಂದ ಸರಕಾರ ಇದನ್ನು ರದ್ದುಗೊಳಿಸಿದೆ.

 ರಾಜ್ಯದ ಜಿಲ್ಲಾ ಮತ್ತು ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ವ್ಯವಸ್ಥೆ ಇದೆ. ಆದರೆ ಯಂತ್ರಗಳ ಕೊರತೆಯಿಂದ ಎಲ್ಲಾ ರೋಗಿಗಳಿಗೂ ಈ ವ್ಯವಸ್ಥೆ ಲಭ್ಯವಾಗುತ್ತಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗಾಗಿ ಹೊಸ ರೋಗಿಗಳು ತಮ್ಮ ಹೆಸರುಗಳನ್ನು ಮೊದಲೇ ನೋಂದಾಯಿಸಿ ಇಡಬೇಕು. ಯಾವುದಾದರೂ ಡಯಾಲಿಸಿಸ್ ರೋಗಿ ನಿಧನರಾದರೆ ಕ್ರಮ ಸಂಖ್ಯೆ ಆಧಾರದಲ್ಲಿ ಮೊದಲು ಹೆಸರು ನೋಂದಾಯಿಸಿದ ಹೊಸ ರೋಗಿಗೆ ಅವಕಾಶ ಸಿಗುತ್ತಿತ್ತು. ಇದಕ್ಕಾಗಿ ವರ್ಷಗಳ ಕಾಲ ಕಾಯಬೇಕಾಗಿದೆ ಎಂಬುದು ರೋಗಿಗಳ ಅಳಲು.

 ಕೆಲವು ದಾನಿಗಳ ಮತ್ತು ಸರಕಾರೇತರ ಸಂಸ್ಥೆಗಳ ನೆರವಿನಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ರಿಯಾಯಿತಿಯಲ್ಲಿ ಅರ್ಹ ರೋಗಿಗಳಿಗೆ ಡಯಾಲಿಸಿಸ್ ಮಾಡುವ ವ್ಯವಸ್ಥೆ ಇದೆ. ಫಲಾನುಭವಿಗಳು ಸರಕಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಬಗ್ಗೆ ಮಾಹಿತಿ ತಿಳಿದು ಅಲ್ಲಿಗೆ ತೆರಳಿದ್ದರು. ಇದೀಗ ಶೇ.50 ರಿಯಾಯಿತಿಯಲ್ಲಿ ಡಯಾಲಿಸಿಸ್ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗಳು ಬೇರೆ ಹೊಸ ರೋಗಿಗಳನ್ನು ಆಯ್ಕೆ ಮಾಡಿವೆ. ಹೀಗಾಗಿ ಹಳೆ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಸಂಪೂರ್ಣ ವೆಚ್ಚ ಭರಿಸಿ ಡಯಾಲಿಸಿಸ್ ಮಾಡಿಸುವ ದುಸ್ಥಿತಿ ನಿರ್ಮಾಣವಾಗಿದೆ.

 ಒಬ್ಬ ಮೂತ್ರ ಪಿಂಡ ರೋಗಿಗೆ ವಾರದಲ್ಲಿ ಕನಿಷ್ಠ 2, ಗರಿಷ್ಠ 3 ಡಯಾಲಿಸಿಸ್ ಮಾಡಬೇಕಾಗಿದೆ. ಒಂದು ಯಂತ್ರದಲ್ಲಿ 24 ಗಂಟೆಯ ಅವಧಿಗೆ 5 ಮಂದಿಗೆ ಮಾತ್ರ ಡಯಾಲಿಸಿಸ್ ಮಾಡಬಹುದಾಗಿದೆ. ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ 10 ಯಂತ್ರಗಳಿದ್ದು, ಪ್ರತಿ ದಿನ 50 ಮಂದಿಗೆ ಮಾತ್ರ ಡಯಾಲಿಸಿಸ್ ಮಾಡಬಹುದಾಗಿದೆ. ಮದ್ಯದಲ್ಲಿ ಒಂದು ಯಂತ್ರ ಕೈಕೊಟ್ಟರೂ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ.

 ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಡಯಾಲಿಸಿಸ್ ಮಾಡುವ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಮಾಸಿಕ 15 ಸಾವಿರ ರೂ. ವ್ಯಯಿಸಬೇಕಾಗುತ್ತದೆ. ಆರೋಗ್ಯ ತೀರಾ ಹದಗೆಟ್ಟ ಡಯಾಲಿಸಿಸ್ ರೋಗಿಗಳು ಆಟೊ ರಿಕ್ಷಾ ಅಥವಾ ಇನ್ಯಾವುದೇ ಬಾಡಿಗೆ ವಾಹನದಲ್ಲಿ ಚಿಕಿತ್ಸೆಗಾಗಿ ಪ್ರಯಾಣಿಸಬೇಕಾಗಿದೆ. ಇದರಿಂದ ಡಯಾಲಿಸಿಸ್ ವೆಚ್ಚ ಅಲ್ಲದೆ ಸಾವಿರಾರು ರೂ. ಪ್ರಯಾಣ ವೆಚ್ಚ ಭರಿಸಬೇಕಾಗಿದೆ.

 ಸರಕಾರ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ವ್ಯವಸ್ಥೆ ಮಾಡಿ ಏಕಾಏಕಿ ರದ್ದು ಪಡಿಸುವ ಮೂಲಕ ಹಲವು ದಾನಿಗಳು, ಸಂಘ ಸಂಸ್ಥೆಗಳ ನೆರವಿನಿಂದ ಡಯಾಲಿಸಿಸ್ ಮಾಡುತ್ತಿದ್ದ ದೀರ್ಘಕಾಲ ಮೂತ್ರ ಪಿಂಡ ಕಾಯಿಲೆಯಿಂದ ಬಳಲುತ್ತಿರುವ ನೂರಾರು ರೋಗಿಗಳು ಬೀದಿಗೆ ಬೀಳುವಂತೆ ಮಾಡಿದೆ. ಶ್ರೀಮಂತರು ಖಾಸಗಿ ಆಸ್ಪತ್ರೆಯಲ್ಲಿ ಸಂಪೂರ್ಣ ವೆಚ್ಚ ಭರಿಸಿ ಡಯಾಲಿಸಿಸ್ ಮಾಡುತ್ತಾರೆ. ಕೂಲಿ ಮಾಡಿ ಕುಟುಂಬವನ್ನು ಸಾಕುತ್ತಿರುವವರಿಗೆ ಇದು ಸಾಧ್ಯವಿಲ್ಲ. ಹಾಗಾಗಿ ಸರಕಾರ ಖಾಸಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಮೊದಲಿನಂತೆ ಶುಲ್ಕ ರಹಿತ ಡಯಾಲಿಸಿಸ್‌ಗೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿ ಎಲ್ಲಾ ರೋಗಿಗಳಿಗೆ ಡಯಾಲಿಸಿಸ್ ಸಿಗುವಂತೆ ಮಾಡಬೇಕು ಎಂಬುದು ಕಿಡ್ನಿ ರೋಗಿಗಳ ಒಕ್ಕೊರಳ ಆಗ್ರಹ.

ಕೋವಿಡ್ ಸಂದರ್ಭ ಸರಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ ಕಾರಣ ಡಯಾಲಿಸಿಸ್ ಮತ್ತು ಇತರ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಿತ್ತು. ಇದೀಗ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮತ್ತು ಇತರ ಚಿಕೆತ್ಸೆಗಳು ಪುನಾರಾರಂಭಗೊಂಡಿದ್ದು ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಿಗೆ ನೀಡಿದ ಅವಕಾಶವನ್ನು ಸರಕಾರ ಸ್ಥಗಿತಗೊಳಿಸಿದೆ.

ಡಾ.ಕಿಶೋರ್ ಮೂಡುಶೆಡ್ಡೆ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯಾಚರಿಸುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಬಡ ರೋಗಿಗಳಿಗೆ ಚಿಕೆತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಿತ್ತು. ಇದನ್ನು ಸ್ಥಗಿತಗೊಳಿಸಿ ಸರಕಾರ ಸುತ್ತೋಲೆ ಕಳುಹಿಸಿದೆ. ಈ ಬಗ್ಗೆ ಸರಕಾರ ಮತ್ತು ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೇನೆ. ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು.

ವೇದವ್ಯಾಸ್ ಕಾಮತ್, ಶಾಸಕ

ಡಯಾಲಿಸಿಸ್ ರೋಗಿಗಳು ಮತ್ತು ಅವರನ್ನು ಆಶ್ರಯಿಸಿದ ಕುಟುಂಬ ದೀರ್ಘಕಾಲದಿಂದ ಸಂಕಷ್ಟದಲ್ಲೇ ದಿನ ದೂಡುತ್ತದೆ. ಸರಕಾರ ಇಷ್ಟ ಬಂದಂತೆ ನಿಯಮ ತಂದು, ರದ್ದು ಪಡಿಸಿರುವುದರಿಂದ ಕಿಡ್ನಿ ಸಮಸ್ಯೆಯ ರೋಗಿಗಳು ಪರದಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟಗಳ ಈ ಸಮಯದಲ್ಲಿ ಡಯಾಲಿಸಿಸ್ ವೆಚ್ಚ ಭರಿಸಲು ಸಾಧ್ಯವಿಲ್ಲದೆ ಸ್ವಾಭಿಮಾನವನ್ನು ಬದಿಗಿಟ್ಟು ಕಂಡವರ ಎದುರು ಕೈಚಾಚುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಡಯಾಲಿಸಿಸ್ ರೋಗಿಗಳ ನೆರವಿಗೆ ಸರಕಾರ ಮುಂದಾಗಬೇಕು. ಮೊದಲಿನಂತೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಅಥವಾ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಿಗಲು ವ್ಯವಸ್ಥೆ ಮಾಡಬೇಕು.

ಅಬ್ದುಲ್ ರಹ್ಮಾನ್ ಸಯೀದ್, ಸಿದ್ದಕಟ್ಟೆ (ಕಿಡ್ನಿ ರೋಗಿ)

  ದಿನದಿಂದ ದಿನಕ್ಕೆ ಮೂತ್ರ ಪಿಂಡ ರೋಗಿಗಳ ಸಂಖ್ಯೆ ವೃದ್ಧಿಸುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸರಕಾರ ಸ್ಥಗಿತ ಗೊಳಿಸಿದ ಡಯಾಲಿಸಿಸ್ ಚಿಕಿತ್ಸೆಯನ್ನು ಮುಂದಿನ ಆರು ತಿಂಗಳುಗಳ ಕಾಲ ಮುಂದುವರಿಸಬೇಕು. ಪರ್ಯಾಯವಾಗಿ ಜಿಲ್ಲಾಸ್ಪತ್ರೆಯಲ್ಲಿ 50, ತಾಲೂಕು ಆಸ್ಪತ್ರೆಗಳಲ್ಲಿ 7 ರಿಂದ 8 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಬೇಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಸೌಲಭ್ಯವನ್ನು ಕಲ್ಪಿಸಿ ಬಡ ಡಯಾಲಿಸಿಸ್ ರೋಗಿಗಳಿಗೆ ಸರಕಾರ ನೆರವಾಗಬೇಕು

ಅಥಾವುಲ್ಲಾ ಜೋಕಟ್ಟೆ,ಎಸ್‌ಡಿಪಿಐ ಜಿಲ್ಲಾಧ್ಯಕ್ಷ

Writer - ಖಾದರ್ ಫರಂಗಿಪೇಟೆ

contributor

Editor - ಖಾದರ್ ಫರಂಗಿಪೇಟೆ

contributor

Similar News