295 ಎಟಿಎಲ್ ದತ್ತು ಪಡೆದ ಸಿಎಸ್‌ಐಆರ್

Update: 2021-04-09 17:45 GMT

ಹೊಸದಿಲ್ಲಿ, ಎ.9: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆ ಹಾಗೂ ನೂತನ ಆವಿಷ್ಕಾರಗಳ ಬಗ್ಗೆ ಜ್ಞಾನ ಬೆಳಸುವ ಉದ್ದೇಶದಿಂದ ದೇಶದಾದ್ಯಂತ 295 ಅಟಲ್ ಟಿಂಕರಿಂಗ್ ಲ್ಯಾಬ್(ಎಟಿಎಲ್)ಗಳನ್ನು ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಸಮಿತಿ(ಸಿಎಸ್‌ಐಆರ್) ದತ್ತು ಪಡೆದುಕೊಂಡಿದೆ ಎಂದು ಮೂಲಗಳು ಹೇಳಿವೆ.

ಸಿಎಸ್‌ಐಆರ್‌ನ ಉನ್ನತ ಸಂಶೋಧನಾ ವಿದ್ವಾಂಸರು ಮತ್ತು ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಈ ಎಟಿಎಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮೂಡಿಸುವ ಉದ್ದೇಶದಿಂದ ಮತ್ತು ದೇಶದಲ್ಲಿ 1 ಮಿಲಿಯನ್ ಮಕ್ಕಳನ್ನು ಆಧುನಿಕ ತಂತ್ರಜ್ಞರನ್ನಾಗಿ ರೂಪಿಸುವ ಉದ್ದೇಶದಿಂದ ನೀತಿ ಆಯೋಗದ ಅಟಲ್ ಹೊಸಕಲ್ಪನೆ ಯೋಜನೆಯಡಿ ದೇಶದಾದ್ಯಂತದ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಆರಂಭಿಸಲಾಗಿದೆ.

ಯುವಜನತೆಯ ಮನಸ್ಸಿನಲ್ಲಿ ಕುತೂಹಲ, ಸೃಜನಾತ್ಮಕತೆ ಮತ್ತು ಕಲ್ಪನಾಶಕ್ತಿಯನ್ನು ಬೆಳೆಸುವುದು ಎಟಿಎಲ್‌ನ ಉದ್ದೇಶವಾಗಿದೆ. ಎಐಎಂ ಮತ್ತು ಸಿಎಸ್‌ಐಆರ್ ಜತೆಗೂಡಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಮೇಲೆ ಸರಣಿ ವೆಬಿನಾರ್‌ಗಳನ್ನು ಆಯೋಜಿಸಲಿದೆ ಎಂದು ನೀತಿ ಆಯೋಗ ಹೇಳಿದೆ. ಈ ಸಹಯೋಗ ವ್ಯವಸ್ಥೆಯಲ್ಲಿ ಎಟಿಎಲ್‌ನ ವಿದ್ಯಾರ್ಥಿಗಳು ಸಿಎಸ್‌ಐಆರ್ ಪ್ರಯೋಗಾಲಯದಲ್ಲಿ ನಡೆಸುವ ಅತ್ಯಾಧುನಿಕ ಸಂಶೋಧನಾ ಕಾರ್ಯಗಳ ವೀಕ್ಷಣೆಗೆ ಅವಕಾಶ ನೀಡಲಾಗುವುದು ಎಂದು ಎಐಎಂ ಯೋಜನಾ ನಿರ್ದೇಶಕ ಮತ್ತು ನೀತಿ ಆಯೋಗದ ಕಾರ್ಯದರ್ಶಿ ಆರ್. ರಮಣನ್ ಹೇಳಿದ್ದಾರೆ. ದೇಶದ ಯುವ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗಿರುವ ಈ ಉಪಕ್ರಮ ಸಿಎಸ್‌ಐಆರ್‌ನ ಇತಿಹಾಸದಲ್ಲಿ ಒಂದು ಪ್ರಮುಖ ಮೈಲುಗಲ್ಲು ಆಗಿದೆ ಎಂದು ಸಿಎಸ್‌ಐಆರ್ ಪ್ರಧಾನ ನಿರ್ದೇಶಕ ಡಾ ಶೇಖರ್ ಸಿ. ಮಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News