ಕೊರೋನ ಪೀಡಿತ 33 ಲಕ್ಷ ಕುಟುಂಬಗಳಿಗೆ ತಲಾ 500ರೂ. ಬಿಡುಗಡೆ ಮಾಡಿದ ರಾಜಸ್ಥಾನ ಸರಕಾರ

Update: 2021-04-10 17:23 GMT

ಜೈಪುರ: ಕೊರೋನ ವೈರಸ್‌ ಪೀಡಿತ 33 ಲಕ್ಷ ಕುಟುಂಬಗಳಿಗೆ ತಲಾ 500ರೂ.ಯಂತೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, "“ಈ ವರ್ಷದ ಬಜೆಟ್‌ನಲ್ಲಿ, ಕೋವಿಡ್‌ ನಿಂದ ತೀವ್ರ ಹಾನಿಗೊಳಗಾಗಿರುವ ಕುಟುಂಬಗಳಿಗೆ ಎರಡು ಕಂತುಗಳಲ್ಲಿ 1,000 ರೂ.ಯ ಮೊದಲ ಕಂತು ಬಿಡುಗಡೆ ಮಾಡಲಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

ಕೊರೋನ ವೈರಸ್ ಪೀಡಿತ 33 ಲಕ್ಷ ಅಸಹಾಯಕ, ನಿರ್ಗತಿಕ ಮತ್ತು ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರ್ಕಾರ ಕಳೆದ ವರ್ಷ ಮೂರು ಕಂತುಗಳಲ್ಲಿ 3,500 ರೂ.ಗಳ ಆರ್ಥಿಕ ನೆರವು ನೀಡಿತ್ತು ಎಂದು ಅವರು ಹೇಳಿದರು. ಬಿಕ್ಕಟ್ಟಿನ ಈ ಸಮಯದಲ್ಲಿ ರಾಜ್ಯ ಸರ್ಕಾರ ಜನರೊಂದಿಗೆ ಇದೆ ಎಂದು ಅವರು ಹೇಳಿದರು.

“ಹಣವನ್ನು ಅರ್ಹ ಕುಟುಂಬಗಳ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗಿದೆ. ಬ್ಯಾಂಕ್ ಖಾತೆ ಇಲ್ಲದವರಿಗೆ ಪರಿಹಾರ ಮೊತ್ತವನ್ನು ನಗದು ರೂಪದಲ್ಲಿ ನೀಡಲಾಗಿದೆ. ಕೋವಿಡ್ ನ ಈ ಕಷ್ಟದ ಹಂತದಲ್ಲಿ, ರಾಜ್ಯ ಸರ್ಕಾರವು ಸಾಮಾನ್ಯ ಜನರೊಂದಿಗೆ ಸಂಪೂರ್ಣವಾಗಿ ನಿಲ್ಲುತ್ತದೆ,” ಎಂದು ಗೆಹ್ಲೋಟ್‌ ಹೇಳಿದ್ದಾರೆ.

ಪಕ್ಷದ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಡೆಸಿದ ಆನ್‌ಲೈನ್ ಸಭೆಯ ಬಗ್ಗೆಯೂ ಗೆಹ್ಲೋಟ್ ಮಾತನಾಡಿದರು.

"ಚುನಾವಣೆಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರನ್ನು ಒಟ್ಟುಗೂಡಿಸುವುದು ಕೋವಿಡ್ ಪ್ರಸರಣವನ್ನು ವೇಗಗೊಳಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಇದಕ್ಕೆ ನಾವೆಲ್ಲರೂ ಸ್ವಲ್ಪ ಮಟ್ಟಿಗೆ ಜವಾಬ್ದಾರರಾಗಿರುತ್ತೇವೆ. ನಾವು ಈ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕು, ರಾಷ್ಟ್ರೀಯ ಹಿತಾಸಕ್ತಿಯನ್ನು ಸ್ವಹಿತಾಸಕ್ತಿಗಿಂತ ಹೆಚ್ಚಾಗಿರಿಸಿಕೊಳ್ಳಬೇಕು ”ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News