×
Ad

ಮತದಾನ ಕೇಂದ್ರದ ಹೊರಗೆ ಗುಂಡಿನ ದಾಳಿ ಒಂದು ‘ನರಮೇಧ’: ಮಮತಾ ಬ್ಯಾನರ್ಜಿ

Update: 2021-04-11 11:37 IST

ಕೋಲ್ಕತಾ,ಎ.11: ಕೂಚ್‌ಬೆಹಾರ್ ಜಿಲ್ಲೆಯಲ್ಲಿ ಶನಿವಾರ ನಡೆದ ಗೋಲಿಬಾರ್ ಘಟನೆಯು ಮತದಾರರನ್ನು ಬೆದರಿಸಲು ಬಿಜೆಪಿ ನಡೆಸಿದ ಸಂಚಾಗಿತ್ತು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ಆಪಾದಿಸಿದ್ದಾರೆ.

ಜಲಪಾಯ್‌ಗುರಿ ಜಿಲ್ಲೆಯಲ್ಲಿ ಮೂರು ಚುನಾವಣಾ ಪ್ರಚಾರ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮಸ್ಥರ ಮೇಲೆ ಗೋಲಿಬಾರ್ ನಡೆಸಿದ ಕೇಂದ್ರೀಯ ಪಡೆಗಳನ್ನು ಬೆಂಬಲಿಸಿರುವ ಬಿಜೆಪಿ ನಾಯಕರು, ತಮ್ಮ ಕುಟುಂಬದ ಯಾರಿಗಾದರೂ ಇದೇ ಗತಿ ಬಂದಿದ್ದರೆ, ತಮ್ಮ ನಿಲುವು ಹೀಗೆಯೇ ಇರುತ್ತಿತ್ತೇ ಎಂದು ಅತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದವರು ಕರೆ ನೀಡಿದರು.

 ‘‘ ಗೋಲಿಬಾರ್ ಘಟನೆಯ ಬಗ್ಗೆ ಕೆಲವು ಬಿಜೆಪಿ ನಾಯಕರು ಕೇಂದ್ರೀಯ ಪಡೆಗಳ ಪರವಾಗಿ ಮಾತನಾಡುವ ವೀಡಿಯೋ ಚಿತ್ರಿಕೆ ನನ್ನ ಬಳಿಯಿದೆ. ಇತರ ಕುಟುಂಬಗಳ ಮಗಂದಿರುವ ಸತ್ತಲ್ಲಿ ನಿಮಗೆ ಬೇಸರವಾಗುವುದಿಲ್ಲ. ಆದರೆ ನಿಮ್ಮ ಕುಟುಂಬದ ಯಾರಿಗಾದರೂ ಇದೇ ಗತಿಯುಂಟಾದರೆ ಏನಾಗುತ್ತಿತ್ತು?’’ ಎಂದು ಮಮತಾ ಪ್ರಶ್ನಿಸಿದರು.

 ತಮ್ಮ ಭಾಷಣಗಳಲ್ಲಿ ಮಮತಾ ಅವರು ಗ್ರಾಮಸ್ಥರ ಮೇಲೆ ಗುಂಡು ಹಾರಾಟ ನಡೆಸಿದ ಕೇಂದ್ರೀಯ ಪಡೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

 ‘‘ಯಾರಾದರೂ ಉಪಟಳ ಮಾಡುತ್ತಿದ್ದಾರೆಂದು ನೀವು ಭಾವಿಸಿದರೆ, ಅಂತಹವರೊಂಇಗದಿಗೆ ಮಾತನಾಡಿ, ನಿಮ್ಮ ಬಳಿ ಲಾಠಿ ಕೂಡಾ ಇರುತ್ತದೆ. ಆದರೆ ನೀವು ಯಾಕೆ ಹಠಾತ್ತನೆ ಬಂದೂಕನ್ನು ಮತದಾರರ ಕತ್ತು ಹಾಗೂ ಹೊಟ್ಟೆಯತ್ತ ಗುರಿಯಿರಿಸಿದ್ದೀರಿ’’ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದರು. ಕೂಚ್‌ಬೆಹಾರ್ ಜಿಲ್ಲೆಯಲ್ಲಿ ನಡೆದ ಗೋಲಿಬಾರ್, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದವರು ಹೇಳಿದರು.

 ಬಿಜೆಪಿಯ ಒತ್ತಡದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ತನ್ನನ್ನು ಹಾಗೂ ಇತರ ರಾಜಕಾರಣಿಗಳನ್ನು ಗೋಲಿಬಾರ್ ನಡೆದ ಸೀತಾಕುಚಿ ಗ್ರಾಮಕ್ಕೆ ಭೇಟಿ ನೀಡದಂತೆ ತಡೆದಿದ್ದಾರೆ ಎಂದು ಮಮತಾ ಆಪಾದಿಸಿದರು.

ಪ್ರತಿಯೊಂದು ಗುಂಡೆಸೆತಕ್ಕೂ ಮತದಾರರು ಮತಗಳ ಮೂಲಕ ಉತ್ತರ ನೀಡಲಿದ್ದಾರೆ ಎಂದು ಮಮತಾ ಹೇಳಿದರು. ಬಂದೂಕಿನ ಟ್ರಿಗ್ಗರ್ ಒತ್ತುವುದರಲ್ಲಿ ಸಂತಸ ಪಡುವ ಬಿಜೆಪಿಯನ್ನು ಸೋಲಿಸಲು ಮತದಾರರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಹಕ್ಕು ಚಲಾಯಿಸಬೇಕೆಂದು ಮಮತಾ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News