ಅತ್ಯಾಚಾರ ಆರೋಪಿ ಕುಲದೀಪ್ ಪತ್ನಿಗೆ ನೀಡಿದ್ದ ಟಿಕೆಟ್ ರದ್ದುಪಡಿಸಿದ ಬಿಜೆಪಿ

Update: 2021-04-11 16:55 GMT

  ಲಕ್ನೋ,ಎ.11: ಉತ್ತರಪ್ರದೇಶದ ಪಂಚಾಯತ್ ಚುನಾವಣೆಗೆ ಉನ್ನಾವೊ ದಲಿತ ಯುವತಿ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆನ್‌ಗಾರ್‌ನ ಪತ್ನಿಯನ್ನು ಕಣಕ್ಕಿಳಿಸಿದ್ದ ಬಿಜೆಪಿಯು ರವಿವಾರ ಆಕೆಯ ಅಭ್ಯರ್ಥನವನ್ನು ಹಿಂತೆಗೆದುಕೊಂಡಿದೆ.

  ಬಿಜೆಪಿಯು ಈ ಮೊದಲು ಘೋಷಿಸಿದ್ದ ಜಿಲ್ಲಾ ಪಂಚಾಯತ್ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದು, ಸೆನ್‌ಗಾರ್‌ನ ಪತ್ನಿ ಸಂಗೀತಾ ಸೆನಗಾರ್ ಅವರನ್ನು ಫತೇಹಪುರ ಚೌರಾಸಿ ವಾರ್ಡ್ ನಂ.22ನಿಂದ ಕಣಕ್ಕಿಳಿಸಿತ್ತು.

 ಆದರೆ ಆನಂತರ ಉತ್ತರಪ್ರದೇಶ ಬಿಜೆಪಿ ವರಿಷ್ಠ ಸ್ವತಂತ್ರ ದೇವ್ ಸಿಂಗ್ ಹೇಳಿಕೆಯೊಂದನ್ನು ನೀಡಿ, ಮಾಜಿ ಬಿಜೆಪಿ ಶಾಸಕ. 2018ರ ಉನ್ನಾವೋ ಅತ್ಯಾಚಾರ ಪ್ರಕರಣದ ದೋಷಿ ಕುಲದೀಪ್ ಸಿಂಗ್ ಸೆಂಗಾರ್‌ನ ಪತ್ನಿ ಸಂಗೀತಾ ಸೆಂಗಾರ್ ಅವರ ಅಭ್ಯರ್ಥನವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

   ಈ ಸ್ಥಾನಕ್ಕೆ ನೂತನ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಲು ಮೂರು ಹೊಸ ಹೆಸರುಗಳನ್ನು ಸೂಚಿಸುವಂತೆಯೂ ಪಕ್ಷದ ಉನ್ನಾವೊ ಜಿಲ್ಲಾಧ್ಯಕ್ಷರಿಗೆ ಸೂಚಿಸಿರುವುದಾಗಿ ದೇವ್ ಸಿಂಗ್ ತಿಳಿಸಿದರು.

 ಆದಾಗ್ಯೂ, ಎಪ್ರಿಲ್ 15ರಿಂದ ನಡೆಯಲಿರುವ ನಾಲ್ಕು ಹಂತಗಳ ಉ.ಪ್ರ.ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯು ಪ್ರಚಂಡ ಜಯಭೇರಿ ಬಾರಿಸಲಿದೆಯೆಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉನ್ನಾವೊದಲ್ಲಿ ಎಪ್ರಿಲ್ 26ರಂದು ಮತದಾನ ನಡೆಯಲಿದೆ.

   17 ವರ್ಷ ವಯಸ್ಸಿನ ದಲಿತ ಬಾಲಕಿಯನ್ನು ಉನ್ನಾವೊದಲ್ಲಿ ಅತ್ಯಾಚಾರಗೈದ ಆರೋಪದಲ್ಲಿ ಕುಲದೀಪ್ ಸೆಂಗಾರ್‌ಗೆ ದಿಲ್ಲಿಯ ನ್ಯಾಯಾಲಯವು 2019ರ ಡಿಸೆಂಬರ್‌ನಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

ಆನಂತರ ಸೆಂಗಾರ್‌ನ ಶಾಸಕತ್ವವ್ನ ರದ್ದುಪಡಿಸಲಾಗಿತ್ತು. ಆತನ ಪತ್ನಿ ಸಂಗೀತಾ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News