​ಹತ್ಯೆಗೀಡಾದ ಪೊಲೀಸ್ ಅಧಿಕಾರಿಯ ತಾಯಿ ಆಘಾತದಿಂದ ಮೃತ್ಯು

Update: 2021-04-12 04:40 GMT

ಪಾಟ್ನಾ: ಕಳವು ಮಾಡಿದ್ದ ಬೈಕ್ ವಶಪಡಿಸಿಕೊಳ್ಳುವ ಸಲುವಾಗಿ ಪಶ್ಚಿಮ ಬಂಗಾಳದ ಗ್ರಾಮವೊಂದಕ್ಕೆ ತೆರಳಿದ್ದ ಪೊಲೀಸ್ ಅಧಿಕಾರಿ ಅಶ್ವಿನಿ ಕುಮಾರ್ (52) ಅವರನ್ನು ಸ್ಥಳೀಯರ ಗುಂಪು ಹತ್ಯೆ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ವೃದ್ಧ ತಾಯಿ ಆಘಾತದಿಂದ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ರವಿವಾರ ತಾಯಿ- ಮಗನ ಅಂತ್ಯಕ್ರಿಯೆಯನ್ನು ಜತೆಗೇ ನಡೆಸಲಾಯಿತು.

ಏತನ್ಮಧ್ಯೆ ದಾಳಿಗೆ ತೆರಳಿದ್ದ ತಂಡದ ಎಲ್ಲ ಇತರ ಪೊಲೀಸ್ ಅಧಿಕಾರಿಗಳನ್ನು ಸಹೋದ್ಯೋಗಿಯ ಜೀವರಕ್ಷಣೆಗೆ ವಿಫಲರಾದ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ.

ಬಿಹಾರದ ಪುರ್ನಿಯಾ ಸಮೀಪದ ಪಂಚು ಮಂಡಲ್ ತೋಲಾ ಗ್ರಾಮದ ಹೊರವಲಯದಲ್ಲಿ ತಾಯಿ- ಮಗನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅಶ್ವಿನಿ ಕುಮಾರ್ ತಾಯಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಏಳು ವರ್ಷದ ಹಿಂದೆ ತಂದೆ ಮೃತಪಟ್ಟಿದ್ದರು. "ಅಶ್ವಿನಿ ಕುಮಾರ್ ಸಾವಿನ ಸುದ್ದಿಯನ್ನು ಮೊದಲು ತಾಯಿಗೆ ಹೇಳಿರಲಿಲ್ಲ. ಆದರೆ ಶನಿವಾರ ಕುಮಾರ್ ಮೃತದೇಹವನ್ನು ಮನೆಗೆ ತಂದ ಬಳಿಕ ತಾಯಿಯ ಆರೋಗ್ಯ ಸ್ಥಿತಿ ಹದಗೆಟ್ಟಿತು. ಮುಂಜಾನೆ 5.30ರ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟರು" ಎಂದು ಅಶ್ವಿನಿ ಕುಮಾರ್ ಅವರ ಸಂಬಂಧಿ ಸುಭಾಸ್ ಸಿಂಗ್ ಹೇಳಿದ್ದಾರೆ.

ಪುರ್ನಿಯಾ ವಿಭಾಗೀಯ ಆಯುಕ್ತ ರಾಹುಲ್ ರಂಜನ್ ಮಹೀವಾಲ್, ಐಜಿ ಸುರೇಶ್ ಪ್ರಸಾದ್ ಚೌಧರಿ, ಜಿಲ್ಲಾಧಿಕಾರಿ ರಾಹುಲ್ ಕುಮಾರ್, ಎಸ್ಪಿ ದಯಾಶಂಖರ್, ಕಿಷನ್‌ಗಂಜ್ ಎಸ್‌ಡಿಪಿಓ ಅನ್ವರ್ ಜಾವೇದ್ ಮತ್ತಿತರರು ಅಂತ್ಯಂಸ್ಕಾರದಲ್ಲಿ ಭಾಗವಹಿಸಿದ್ದರು. ಅಶ್ವಿನಿ ಕುಮಾರ್ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. ಇವರು 1994ನೇ ಬ್ಯಾಚ್ ಇನ್‌ಸ್ಪೆಕ್ಟರ್ ಶ್ರೇಣಿಯ ಅಧಿಕಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News