ಒಡಿಶಾದಲ್ಲಿ 900 ಕೊರೋನ ಲಸಿಕಾ ಕೇಂದ್ರ ಬಂದ್ : ಬಿಜಯ್ ಪಾಣಿಗ್ರಾಹಿ

Update: 2021-04-12 05:19 GMT
ಸಾಂದರ್ಭಿಕ ಚಿತ್ರ

ಭುವನೇಶ್ವರ: ಕೊರೋನ ಲಸಿಕೆ ಕೊರತೆಯಿಂದಾಗಿ ಒಡಿಶಾ ರಾಜ್ಯದಲ್ಲಿ 900ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಬಿಜಯ್ ಪಾಣಿಗ್ರಾಹಿ ಹೇಳಿದ್ದಾರೆ.

ಕೊರೋನ ವೈರಸ್ ವಿರುದ್ಧದ ಎರಡನೇ ಮಹಾಯುದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ ’ಟೀಕಾ ಉತ್ಸವ್’ ಒಡಿಶಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ರಾಜ್ಯಾದ್ಯಂತ ಒಟ್ಟು 593 ಕೇಂದ್ರಗಳಲ್ಲಿ ಕೇವಲ 81,169 ಮಂದಿ ಮೊದಲ ದಿನ ಲಸಿಕೆ ಪಡೆಯಲು ಸಾಧ್ಯವಾಗಿದೆ. ಎ. 10ರಂದು ರಾಜ್ಯದಲ್ಲಿ 1,13,566 ಮಂದಿಗೆ ಲಸಿಕೆ ನೀಡಲಾಗಿತ್ತು. ಆದರೆ ಟೀಕಾ ಉತ್ಸವದ ಮೊದಲ ದಿನ ಲಸಿಕೆ ಕೊರತೆಯಿಂದಾಗಿ ಈ ಪ್ರಮಾಣ 81,169ಕ್ಕೆ ಕುಸಿದಿದೆ. ರಾಜ್ಯದಲ್ಲಿ ಲಭ್ಯವಿರುವ ಲಸಿಕೆ ಆಧಾರದಲ್ಲಿ ಕೇವಲ 775 ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲು ಸಾಧ್ಯ ಎಂದು ಉನ್ನತ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ 1400 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಲಸಿಕೆ ಕೊರತೆಯಿಂದಾಗಿ ಇದೀಗ 900ಕ್ಕೂ ಹೆಚ್ಚು ಕೇಂದ್ರಗಳನ್ನು ಮುಚ್ಚಲಾಗಿದೆ. ಆದ್ದರಿಂದ ಎ. 13 ಮತ್ತು 14ರಂದು ಟೀಕಾ ಉತ್ಸವ್ ಮುಂದುವರಿಯುವುದು ಅನಿಶ್ಚಿತ ಎಂದು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಬಿಜಯ್ ಪಾಣಿಗ್ರಾಹಿ ಹೇಳಿದ್ದಾರೆ.

ಎ. 8ರಂದು ಪ್ರಧಾನಿ ನರೇಂದ್ರ ಮೋದಿ ಜತೆ ನಡೆಸಿದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 25 ಲಕ್ಷ ಲಸಿಕೆಗಳಿಗೆ ಬೇಡಿಕೆ ಮಂಡಿಸಿದ್ದರೂ, ಕೇವಲ 2.5 ಲಕ್ಷ ಲಸಿಕೆಗಳನ್ನಷ್ಟೇ ಪೂರೈಸಲಾಗಿದೆ. ರಾಜ್ಯದಲ್ಲಿ ಟೀಕಾ ಉತ್ಸವ್ ಮುಂದುವರಿಸಲು ಅಗತ್ಯ ಪ್ರಮಾಣದ ಲಸಿಕೆ ವಿತರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎನ್.ಕೆ.ದಾಸ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ.ಮಹಾಪಾತ್ರ ಕೇಂದ್ರಕ್ಕೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News