ಮಹಾರಾಷ್ಟ್ರ: ಒಂದು ಕೋಟಿಗೂ ಅಧಿಕ ಮಂದಿಗೆ ಕೋವಿಡ್-19 ಲಸಿಕೆ

Update: 2021-04-12 05:30 GMT

ಮುಂಬೈ: ದೇಶದಲ್ಲೇ ಅತ್ಯಧಿಕ ಸಂಖ್ಯೆಯ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ಮಹಾರಾಷ್ಟ್ರದಲ್ಲಿ ರವಿವಾರದವರೆಗೆ ಒಂದು ಕೋಟಿಗೂ ಅಧಿಕ ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದ್ದು, ಇದು ದೇಶದಲ್ಲೇ ಅತ್ಯಧಿಕ.

ಲಸಿಕೆ ನೀಡಿಕೆ ಆರಂಭವಾದ 70 ದಿನಗಳಲ್ಲಿ ಈ ಮೈಲುಗಲ್ಲು ತಲುಪಲಾಗಿದ್ದು, ಗುರಿ ಮಾಡಲಾದ ವರ್ಗದ ಪೈಕಿ ಮೂರನೇ ಒಂದರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಜಸ್ಥಾನ 96 ಲಕ್ಷ ಡೋಸ್‌ಗಳೊಂದಿಗೆ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರದಲ್ಲಿ ಶೇಕಡ 86.3ರಷ್ಟು ಆರೋಗ್ಯ ಕಾರ್ಯಕರ್ತರು ಮತ್ತು 72.7% ಮುಂಚೂಣಿ ಕಾರ್ಯಕರ್ತರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟ ನಾಗರಿಕರ ಪೈಕಿ ಶೇಕಡ 19.7ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಪ್ರದೀಪ್ ವ್ಯಾಸ್ ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು ಮೂರು ಕೋಟಿ ಮಂದಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ 45 ವರ್ಷ ಮೇಲ್ಪಟ್ಟ 71 ಲಕ್ಷ ಮಂದಿ ಸೇರಿದಂತೆ ಒಟ್ಟು 1,00,38,421 ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 15.52 ಲಕ್ಷ ಆರೋಗ್ಯ ಕಾರ್ಯಕರ್ತರು, 12.5 ಲಕ್ಷ ಮಂದಿ ಮುಂಚೂಣಿ ಕಾರ್ಯಕರ್ತರು ಸೇರಿದ್ದಾರೆ. ರಾಜ್ಯದಲ್ಲಿ ಇದುವರೆಗೆ 89.7 ಲಕ್ಷ ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು, 9.5 ಲಕ್ಷ ಮಂದಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಆದಾಗ್ಯೂ ಪ್ರತಿ ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಲಸಿಕೆ ಪಡೆದವರ ಸಂಖ್ಯೆ, ರಾಜಸ್ಥಾನದಂಥ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಪಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜನವರಿ 6ರಂದು ಮೊದಲ ಬಾರಿಗೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದಾಗ 18,338 ಲಸಿಕೆ ರಾಜ್ಯಕ್ಕೆ ದೊರಕಿತ್ತು. ಆದರೆ ಇದೀಗ ಈ ಪ್ರಮಾಣ 14 ಲಕ್ಷವನ್ನು ದಾಟಿದೆ. ದಿನಕ್ಕೆ ಆರು ಲಕ್ಷ ಮಂದಿಗೆ ಲಸಿಕೆ ನೀಡಬೇಕಿದ್ದರೆ ವಾರಕ್ಕೆ 40 ಲಕ್ಷ ಡೋಸ್‌ಗಳ ಪೂರೈಕೆ ಅಗತ್ಯವಿದೆ ಎಂದು ವ್ಯಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News