ಕುಂಭ ಮೇಳದಲ್ಲಿ ಲಕ್ಷಾಂತರ ಜನರು: ಕೋವಿಡ್ ನಿಯಮ ಪಾಲಿಸಿದರೆ ಕಾಲ್ತುಳಿತ ಸಂಭವಿಸಬಹುದು ಎಂದ ಹಿರಿಯ ಪೊಲೀಸ್ ಅಧಿಕಾರಿ

Update: 2021-04-12 10:35 GMT

ಹರಿದ್ವಾರ್: ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಎರಡನೇ ಅಲೆ, ಹಾಗೂ ಭಾರತ ರವಿವಾರ ಗರಿಷ್ಠ 1,68,912 ಕೋವಿಡ್ ಪ್ರಕರಣಗಳನ್ನು ದಾಖಲಿಸಿದ್ದರೂ ಉತ್ತರಾಖಂಡದ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಕುಂಭ ಮೇಳದ ಅಂಗವಾಗಿ ಪವಿತ್ರ ಸ್ನಾನ ಮಾಡಲು ನೆರೆದಿರುವ ಸಾವಿರಾರು ಭಕ್ತರು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸದೆ ಆತಂಕ ಮೂಡಿಸಿದ್ದಾರೆ. ಈ ನಡುವೆ ಈ ಕುರಿತು ಪ್ರತಿಕ್ರಿಯಿಸಿದ ಇನ್‍ಸ್ಪೆಕ್ಟರ್ ಜನರಲ್ ಸಂಜಯ್ ಗುಂಜಿಯಾಲ್, ಇಲ್ಲಿ ಸಾಮಾಜಿಕ ಅಂತರ ಕಾಪಾಡುವಂತಾಗಲು ಪೊಲೀಸರು ಪ್ರಯತ್ನಿಸಿದರೆ ಕಾಲ್ತುಳಿತದಂತಹ ಘಟನೆ ನಡೆಯಬಹುದು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

"ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಜನರಿಗೆ ಸತತ ಅಪೀಲು ಮಾಡುತ್ತಿದ್ದೇವೆ. ಆದರೆ ಇಷ್ಟೊಂದು ಜನಸಾಗರದ ನಡುವೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವುದು ಅಸಾಧ್ಯ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದೂ ಕಷ್ಟಕರ,'' ಎಂದು ಅವರು ಹೇಳಿದರು.

"ಎರಡು ಅಖಾರಾಗಳ 'ಪವಿತ್ರ ಸ್ನಾನ'ದ ನಡುವೆ ನಾವು ಅರ್ಧ ಗಂಟೆ ಅಂತರ ಕಾಪಾಡುವಂತೆ ಮಾಡಿದ್ದೇವೆ, ಈ ಸಂದರ್ಭದಲ್ಲಿ  ಘಾಟ್ ಪ್ರದೇಶವನ್ನು ಸ್ವಚ್ಛಗೊಳಿಸಲಾಗುತ್ತದೆ, ಈ ಬಾರಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಜನಸ್ತೋಮ ನಾವು ನಿರೀಕ್ಷಿಸಿದ್ದಕ್ಕಿಂತ ಶೇ50ರಷ್ಟು ಕಡಿಮೆಯಾಗಿದೆ,'' ಎಂದು ಉತ್ತರಾಖಂಡ ಡಿಜಿಪಿ (ಹರಿದ್ವಾರ) ಅಶೋಕ್ ಕುಮಾರ್ ಹೇಳಿದರು.

ಕುಂಭ ಮೇಳದಲ್ಲಿ ಭಾಗವಹಿಸಿದವರಲ್ಲಿ ಮಾಸ್ಕ್ ಧರಿಸದವರ ಮೇಲೆ ನಿಗಾ ಇಡಲು ಕೃತಕ ಬುದ್ಧಿಮತ್ತೆ ಬಳಸಲಾಗುವುದು ಎಂದು ಪೊಲೀಸರು ಹೇಳಿದ್ದು, ವಿವಿಧ ಸ್ಥಳಗಳಲ್ಲಿ 350 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇವುಗಳ ಪೈಕಿ 100 ಕ್ಯಾಮರಾಗಳಿಗೆ ಇರುವ ಸೆನ್ಸಾರುಗಳು ಮಾಸ್ಕ್ ಧರಿಸದ ವ್ಯಕ್ತಿಯ ಚಿತ್ರ ತೆಗೆದಾಗ ಅಲರ್ಟ್ ನೀಡುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಸದ್ಯ 7,323 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1,082 ಹೊಸ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News