ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೇ ಮೃತಪಟ್ಟ ಗುಜರಾತ್‌ ಕೇಂದ್ರೀಯ ವಿವಿ ಪ್ರೊಫೆಸರ್‌

Update: 2021-04-13 07:48 GMT
photo: Indiatoday

ಅಹ್ಮದಾಬಾದ್: ಉಸಿರಾಟ ಸಮಸ್ಯೆ ಎದುರಿಸುತ್ತಿದ್ದ ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲದ  ಸ್ಕೂಲ್ ಆಫ್ ನ್ಯಾನೋಸಾಯನ್ಸಸ್ ಡೀನ್ ಪ್ರೊಫೆಸರ್ ಇಂದ್ರಾಣಿ ಬ್ಯಾನರ್ಜಿ ಅವರನ್ನು ಅವರ ಸಹೋದ್ಯೋಗಿಳು ಹಾಗೂ ವಿದ್ಯಾರ್ಥಿಗಳು  ಕನಿಷ್ಠ ಎರಡು ಮೂರು ಆಸ್ಪತ್ರೆಗಳಿಗೆ ಕರೆದೊಯ್ದರೂ ಅಲ್ಲಿ ಚಿಕಿತ್ಸೆ ದೊರೆಯದೆ ಕೊನೆಗೆ ಚಿಕಿತ್ಸೆ ಲಭಿಸುವಷ್ಟರ ಹೊತ್ತಿಗೆ ಕೈಮೀರಿ ಇಂದ್ರಾಣಿ ಅವರ ಪ್ರಾಣ ಉಳಿಸುವುದು ಸಾಧ್ಯವಾಗಿಲ್ಲ.

ಶುಕ್ರವಾರ ಸಂಜೆ ಇಂದ್ರಾಣಿ ಅವರು ಉಸಿರಾಟದ ತೊಂದರೆಯುಂಟಾಗಿರುವ ಕುರಿತು ಹೇಳಿಕೊಂಡಾಗ ಅವರ ವಿದ್ಯಾರ್ಥಿಗಳು ಅವರನ್ನು ಗಾಂಧಿನಗರದ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಅದಾಗಲೇ ಆಸ್ಪತ್ರೆ ರೋಗಿಗಳಿಂದ ತುಂಬಿ ತುಳುಕುತ್ತಿದ್ದುದರಿಂದ ಆಕೆಯ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ  ಆ ಆಸ್ಪತ್ರೆಯಲ್ಲೂ  ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ವೆಂಟಿಲೇಟರ್ ಕೊರತೆಯಿದೆಯೆಂದು ಅಲ್ಲಿನ ಅಧಿಕಾರಿಗಳು ಹೇಳಿದ್ದರು.

ಕೊನೆಗೆ ಶನಿವಾರ ವಿದ್ಯಾರ್ಥಿಗಳು ಖಾಸಗಿ ವಾಹನದಲ್ಲಿ ಆಕೆಯನ್ನು ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಶನ್ನಿನ ಕೋವಿಡ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ನಿಗದಿತ ಇಎಂಆರ್‍ಐ 108 ಅಂಬ್ಯುಲೆನ್ಸ್ ನಲ್ಲಿ ಕರೆತರದೇ ಇರುವುದರಿಂದ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಲಾಯಿತು.

ಉಪಾಯವಿಲ್ಲದೆ ಮತ್ತೆ ಗಾಂಧಿನಗರ ಸಿವಿಲ್ ಆಸ್ಪತ್ರೆಗೆ ಕರೆ ತಂದಾಗ ಆಕೆಯ ಆಕ್ಸಿಜನ್ ಪ್ರಮಾಣ ಶೇ60ರಷ್ಟು ಕುಸಿದಿತ್ತು ಎಂದು ಆಕೆಯ ಸಹೋದ್ಯೋಗಿಗಳು ಹೇಳಿದ್ದಾರೆ. ಆಸ್ಪತ್ರೆ ಆಕೆಗೆ ಆಮ್ಲಜನಕದ ವ್ಯವಸ್ಥೆ  ಮಾಡುವಷ್ಟರ ವೇಳೆಗೆ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ತಿಳಿದು ಬಂದಿದೆ.

ಇಂದ್ರಾಣಿ ಅವರು ಭೌತಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಹೊಂದಿದ್ದರಲ್ಲದೆ ಮುಂಬೈಯ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರ ಹಾಗೂ ಪುಣೆ ವಿವಿಯ ಫೆಲ್ಲೋ ಆಗಿದ್ದರು. ಕ್ಯಾಲಿಫೋರ್ನಿಯಾ ವಿವಿಯ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಸಂದರ್ಶಕ ವಿಜ್ಞಾನಿಯೂ ಆಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News