×
Ad

ಕುಂಭಮೇಳದ ಫೋಟೊ ಪ್ರಕಟಿಸಿ "ನಾವು ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕು" ಎಂದ ರಾಮ್‌ ಗೋಪಾಲ್‌ ವರ್ಮಾ

Update: 2021-04-13 14:27 IST

ಹೊಸದಿಲ್ಲಿ: ಉತ್ತರಾಖಂಡ ರಾಜ್ಯದಲ್ಲಿ ನಡೆಯುತ್ತಿರುವ ಬೃಹತ್‌ ಕುಂಭಮೇಳದಲ್ಲಿ ಸೇರಿರುವ ಜನಸ್ತೋಮದ ಫೋಟೊವನ್ನು ಪ್ರಕಟಿಸಿದ ಬಾಲಿವುಡ್‌ ನ ಖ್ಯಾತ ಚಿತ್ರ ನಿರ್ದೇಶಕ ರಾಮ್‌ ಗೋಪಾಲ್‌ ವರಮಾ "ನಾವು ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕು" ಎಂದು ಹೇಳಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿದ ವರ್ಮಾ " ಕೊರೋನ ವೈರಸ್‌ ಕುಂಭಮೇಳದಲ್ಲಿ ಸೇರಿರುವ ಜನರನ್ನು ನೋಡಿ ಬಾಯಿ ಚಪ್ಪರಿಸುತ್ತಿದೆ. ಗುಡ್‌ ಬೈ ಇಂಡಿಯಾ, ವೆಲ್‌ ಕಮ್‌ ಕೊರೋನ" ಎಂದು ಟ್ವೀಟ್‌ ಮಾಡಿದ್ದಾರೆ.

ತಮ್ಮ ಸರಣಿ ಟ್ವೀಟ್‌ ನಲ್ಲಿ ಕುಂಭಮೇಳ ಮತ್ತು ಕಳೆದ ವರ್ಷ ತಬ್ಲೀಗ್‌ ಜಮಾತ್‌ ನವರ ತಮ್ಮ ಸಮಾವೇಶಕ್ಕೆ ಆಗಮಿಸಿದ್ದರ ಕುರಿತು ಪ್ರಸ್ತಾಪ ಮಾಡಿದ ಅವರು, "ಈಗಿನ ಬಾಹುಬಲಿ ಕುಂಭಮೇಳಕ್ಕೆ ಹೋಲಿಸಿದರೆ, ಕಳೆದ ಮಾರ್ಚ್‌ 2020ರ ದಿಲ್ಲಿ ಜಮಾತ್‌ ಸೂಪರ್‌ ಸ್ಪ್ರೆಡರ್‌ ಒಂದು ಶಾರ್ಟ್‌ ಫಿಲ್ಮ್‌ ಆಗಿತ್ತು. ಎಲ್ಲ ಹಿಂದೂಗಳು ಮುಸ್ಲಿಮರ ಕ್ಷಮೆ ಕೇಳಬೇಕಾಗಿದೆ. ಅವರು ಏನೂ ತಿಳಿಯದೇ ಕಳೆದ ವರ್ಷ ಮಾಡಿದ್ದನ್ನು ನಾವು ಎಲ್ಲವನ್ನೂ ತಿಳಿದುಕೊಂಡು ಈ ವರ್ಷ ಮಾಡುತ್ತಿದ್ದೇವೆ" ಎಂದು ಟ್ವೀಟ್‌ ಮಾಡಿದ್ದಾರೆ.

"ಬಾಹ್ಯಾಕಾಶ ಅನಂತ ಅನ್ನುವ ವಿಚಾರದಲ್ಲಿ ನನಗೆ ಖಚಿತತೆಯಿಲ್ಲ. ಆದರೆ ಮೂರ್ಖತನ ಅನಂತವಾದದ್ದು ಅನ್ನುವುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ" ಎಂಬ ಅಲ್ಬರ್ಟ್‌ ಐನ್‌ ಸ್ಟೈನ್‌ ರ ಹೇಳಿಕೆಯನ್ನು ಉಲ್ಲೇಖಿಸಿದ ರಾಂ ಗೋಪಾಲ್‌ ವರ್ಮಾ, ಕುಂಭ ಮೇಳದ ಮತ್ತು ಕಳೆದ ವರ್ಷದ ತಬ್ಲೀಗಿ ಜಮಾತ್‌ ನ ಫೋಟೊ ಪ್ರಕಟಿಸಿದ್ದಾರೆ.

"ನೀವು ನೋಡುತ್ತಿರುವುದು ಕುಂಭಮೇಳ ಅಲ್ಲ, ಇದೊಂದು ಕೊರೋನ ಆಟಮ್‌ ಬಾಂಬ್‌" ಎಂದು ವರ್ಮಾ ಕುಂಭಮೇಳದಲ್ಲಿ ನೆರೆದಿರುವ ಲಕ್ಷಾಂತರ ಜನಸ್ತೋಮದ ಫೋಟೊ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News