ದೇಶದಲ್ಲಿ ಎರಡು ಲಕ್ಷ ಸನಿಹಕ್ಕೆ ದೈನಿಕ ಕೊರೋನ ಪ್ರಕರಣ: 10 ದಿನಗಳಲ್ಲಿ ದ್ವಿಗುಣ

Update: 2021-04-15 03:53 GMT

ಹೊಸದಿಲ್ಲಿ, ಎ.15: ದೇಶದಲ್ಲಿ ಒಂದು ದಿನದ ಕೋವಿಡ್-19 ಪ್ರಕರಣಗಳ ಸಂಖ್ಯೆ ಮೊದಲ ಬಾರಿಗೆ ಎರಡು ಲಕ್ಷದ ಸನಿಹಕ್ಕೆ ಬಂದಿದೆ. ಬುಧವಾರ ದೇಶದಲ್ಲಿ 1,99,620 ಹೊಸ ಪ್ರಕರಣಗಳು ವರದಿಯಾಗಿದ್ದು, ದೈನಿಕ ಪ್ರಕರಣಗಳ ಸಂಖ್ಯೆ ಕೇವಲ ಹತ್ತು ದಿನಗಳಲ್ಲಿ ದ್ವಿಗುಣಗೊಂಡಿದೆ. ಬುಧವಾರ ದಾಖಲಾದ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕಿಂತ ಕೇವಲ 380ರಷ್ಟು ಕಡಿಮೆ. ದೇಶದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ ಹತ್ತು ದಿನಗಳ ಒಳಗಾಗಿ ಎರಡು ಲಕ್ಷದ ಸನಿಹಕ್ಕೆ ಬಂದಿದೆ.

ಒಂದೇ ದಿನ ಎರಡು ಲಕ್ಷಕ್ಕಿಂತ ಅಧಿಕ ಪ್ರಕರಣಗಳು ವರದಿಯಾದ ಏಕೈಕ ದೇಶವಾದ ಅಮೆರಿಕದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ ಒಂದು ಲಕ್ಷದಿಂದ ಎರಡು ಲಕ್ಷ ತಲುಪಲು 21 ದಿನ ತೆಗೆದುಕೊಂಡಿತ್ತು. ಅಮೆರಿಕದಲ್ಲಿ ಕಳೆದ ವರ್ಷದ ಅಕ್ಟೋಬರ್ 30ರಂದು ದೈನಿಕ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿತ್ತು. ನವೆಂಬರ್ 20ರಂದು ದೈನಿಕ ಪ್ರಕರಣಗಳ ಸಂಖ್ಯೆ ಎರಡು ಲಕ್ಷ ಆಗಿತ್ತು. ಜನವರಿ 8ರಂದು ಸಾರ್ವಕಾಲಿಕ ದಾಖಲೆ ಎನಿಸಿದ 3,09,035 ಪ್ರಕರಣಗಳು ದಾಖಲಾಗಿದ್ದವು ಎಂದು ವರ್ಲ್ಡ್‌ಮೀಟರ್ಸ್‌.ಇನ್ಫೋ ವರದಿ ಮಾಡಿದೆ.

ಎರಡನೇ ಅಲೆ ದೇಶವನ್ನು ಅಪ್ಪಳಿಸಿದ ಬಳಿಕ 11 ದಿನಗಳಲ್ಲಿ ಒಂಭತ್ತನೇ ಬಾರಿ ದೈನಿಕ ಪ್ರಕರಣಗಳ ಸಂಖ್ಯೆ ಹೊಸ ಎತ್ತರಕ್ಕೇರಿದೆ. ಸತತ ಎರಡನೇ ದಿನ ಸಾವಿನ ಸಂಖ್ಯೆ ಸಾವಿರಕ್ಕಿಂತ ಅಧಿಕವಿದ್ದು, ಬುಧವಾರ 1,038 ಸಾವು ಸಂಭವಿಸಿದೆ. ಕಳೆದ ವರ್ಷದ ಅಕ್ಟೋಬರ್ 2ರಂದು ದಾಖಲಾದ 1,035 ಸಾವಿನ ಪ್ರಕರಣಗಳ ಬಳಿಕ ದಾಖಲಾದ ಅತ್ಯಧಿಕ ಸಂಖ್ಯೆ ಇದಾಗಿದೆ.

ಉತ್ತರ ಪ್ರದೇಶ (20,510), ಮಹಾರಾಷ್ಟ್ರ (20,000), ದಿಲ್ಲಿ(17,282), ಕರ್ನಾಟಕ (11,265), ಮಧ್ಯಪ್ರದೇಶ (9,720), ಗುಜರಾತ್ (7,410), ರಾಜಸ್ಥಾನ (6,200), ಹರ್ಯಾಣ (5,398), ಬಂಗಾಳ (5,892) ಮತ್ತು ಬಿಹಾರ (4,786) ರಾಜ್ಯಗಳು ಅತ್ಯಧಿಕ ಪ್ರಕರಣಗಳನ್ನು ಕಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News