ಕೊರೋನ ಲಸಿಕೆ ಬದಲು ರೇಬಿಸ್ ನಿರೋಧಕ ಲಸಿಕೆ ನೀಡಿದ ಪ್ರಕರಣ: ಆಸ್ಪತ್ರೆಯ ಸಿಬ್ಬಂದಿ ವಜಾ

Update: 2021-04-15 17:25 GMT

ಲಕ್ನೊ, ಎ.15: ಉತ್ತರಪ್ರದೇಶದ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಕೊರೋನ ಲಸಿಕೆಯ ಬದಲು ರೇಬಿಸ್ ನಿರೋಧಕ ಲಸಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸರಕಾರಿ ಆಸ್ಪತ್ರೆಯ ಔಷಧ ವಿತರಕನನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು ಮತ್ತೊಬ್ಬ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವಾರ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿತ್ತು. 72, 70 ಮತ್ತು 60 ವರ್ಷದ ಮೂವರು ಮಹಿಳೆಯರು ಕೊರೋನ ಸೋಂಕಿನ ವಿರುದ್ಧದ ಲಸಿಕೆ ಪಡೆಯಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಅಲ್ಲಿನ ಸಿಬಂದಿಯ ಅಚಾತುರ್ಯದಿಂದ ಕೊರೋನ ಲಸಿಕೆಯ ಬದಲು ರೇಬಿಸ್ ನಿರೋಧಕ ಲಸಿಕೆ ನೀಡಲಾಗಿದ್ದು ಈ ಬಗ್ಗೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿ ವರದಿ ಒಪ್ಪಿಸಿದ್ದರು.

ಪ್ರಕರಣದಲ್ಲಿ ಮೂವರು ಸಿಬಂದಿಗಳ ಕರ್ತವ್ಯ ಲೋಪದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದ ಹಿನ್ನೆಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಅಧಿಕಾರಿ ರಣಬೀರ್ ಸಿಂಗ್ರನ್ನು ವರ್ಗಾಯಿಸಲಾಗಿದೆ. ಆರೋಗ್ಯ ಕೇಂದ್ರದ ಔಷಧ ವಿತರಕನನ್ನು ಕೆಲಸದಿಂದ ವಜಾಗೊಳಿಸಿದ್ದು, ಮತ್ತೊಬ್ಬ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News