ಕುಂಭಮೇಳವನ್ನು ಸಮರ್ಥಿಸಿದ ಬಾಕ್ಸರ್ ಯೋಗೇಶ್ವರ್‌ ಗೆ ‌ʼಪಂಚ್‌ʼ ನೀಡಿದ ಶೂಟರ್‌ ಅಭಿನವ್‌ ಬಿಂದ್ರಾ

Update: 2021-04-18 13:19 GMT
photo: Thewire

ಹೊಸದಿಲ್ಲಿ: ದೇಶದಾದ್ಯಂತ ಕೊರೋನ ವೈರಸ್‌ ದೈನಂದಿನ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ದಿನವೂ ಎರಡೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದೆ. ಇಂದು ದೇಶದಾದ್ಯಂತ 1,492 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ನಡುವೆ ಉತ್ತರಾಖಂಡದಲ್ಲಿ ಕುಂಭಮೇಳ ನಡೆಯುತ್ತಿದ್ದು, ಹಲವಾರು ಮಂದಿಗೆ ಸೋಂಕು ಕಂಡು ಬಂದಿದೆ. ಈ ಕುರಿತಾದಂತೆ ಕುಂಭಮೇಳವನ್ನು ಸಮರ್ಥಿಸಿ ಪೋಸ್ಟ್‌ ಮಾಡಿದ್ದ ಬಾಕ್ಸರ್‌ ಯೋಗೇಶ್ವರ್‌ ದತ್‌ ಗೆ ಶೂಟರ್‌ ಅಭಿನವ್‌ ಬಿಂದ್ರಾ ಟ್ವಿಟರ್ ನಲ್ಲೇ ತಿರುಗೇಟು ನೀಡಿದ್ದಾರೆ.

"ಕುಂಭಮೇಳಕ್ಕೆ ಯಾರೂ ಅಕ್ರಮವಾಗಿ ಪ್ರವೇಶ ಮಾಡಿಲ್ಲ. ಜನರು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆ. ಮೆಡಿಕಲ್‌ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಯಾರೂ ಉಗುಳುತ್ತಿಲ್ಲ. ಆಡಳಿತಕ್ಕೆ ಹೆದರಿ ಪಲಾಯನವನ್ನೂ ಮಾಡಿಲ್ಲ. ಕುಂಭಮೇಳದ ಶಾಂತಿಯುತ ಭಕ್ತರನ್ನು  ಮಾನಹಾನಿ ಮಾಡಬೇಡಿ" ಎಂದು ಒಲಿಂಪಿಕ್‌ ಪದಕ ವಿಜೇತ ಯೋಗೇಶ್ವರ್‌ ದತ್ ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಗೆ ಪ್ರತಿಕ್ರಿಯೆ ನೀಡಿದ ಒಲಿಂಪಿಕ್‌ ಪದಕ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ, "ಸಾಂಕ್ರಾಮಿಕ ರೋಗವೊಂದು ದೇಶಕ್ಕೆ ಹಾನಿ ಮಾಡುತ್ತಿರುವ ಸಂದರ್ಭದಲ್ಲಿ ಕುಂಭಮೇಳದ ಅಗತ್ಯವಿತ್ತೇ? ವೈರಸ್‌ ಯಾವತ್ತೂ ಧರ್ಮಗಳ ನಡುವೆ ಬೇಧ ಭಾವ ಮಾಡುವುದಿಲ್ಲ. ಅಥ್ಲೀಟ್‌ ಗಳು ತಮ್ಮ ಗುರಿಯ ಮೇಲೆ ಕಣ್ಣಿಡಬೇಕು. ಇಂತಹಾ ಪ್ರಮುಖ ಸಂದರ್ಭಗಳಲ್ಲಿ ಜನರ ಜೀವ ರಕ್ಷಿಸುವುದರಲ್ಲಿ ನಮ್ಮ ಗಮನ ಅಚಲವಾಗಿರಬೇಕು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಮೇಲೆ ಸಹಾನುಭೂತಿ ವ್ಯಕ್ತಪಡಿಸಬೇಕು. ನೀವು ಸಂಪೂರ್ಣ ಕ್ರೀಡಾ ಸಮುದಾಯವನ್ನೇ ವೈಫಲ್ಯಕ್ಕೊಳಪಡಿಸುತ್ತಿದ್ದೀರಿ" ಎಂದು ಟ್ವೀಟ್‌ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಯೋಗೇಶ್ವರ ದತ್‌, "ಕುಂಭಮೇಳವನ್ನು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡೇ ನಡೆಸಲಾಗಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌ ರ ಮೇಲ್ವಿಚಾರಣೆಯಲ್ಲಿ ಕುಂಭಮೇಳ ನಡೆಯುತ್ತಿದೆ. ಇನ್ನು ಕ್ರೀಡೆಯಲ್ಲಿನ ಪ್ರಾತಿನಿಧ್ಯ ಕೇವಲ ಒಬ್ಬ ಆಟಗಾರನ ಆಸ್ತಿಯಲ್ಲ" ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News