ಮೋದಿ ಪ್ರಧಾನಿಯಾಗಿ ಅಲ್ಲ ಪಕ್ಷದ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ: ಸಿಪಿಎಂ ಟೀಕೆ

Update: 2021-04-18 12:45 GMT

ಹೊಸದಿಲ್ಲಿ: ಕೋವಿಡ್ ಸೋಂಕು ಉಲ್ಬಣದಿಂದಾಗಿ ದೇಶದ ಸ್ಥಿತಿ ಹದಗೆಡುತ್ತಿರುವ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿರುವುದನ್ನು ಕಟುವಾಗಿ ಟೀಕಿಸಿರುವ ಸಿಪಿಎಂ, “ಮೋದಿ ಪ್ರಧಾನಿಯಾಗಿ ಅಲ್ಲ, ಪಕ್ಷದ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ'' ಎಂದು ಕಿಡಿಕಾರಿದೆ.

ನಾವು ಭಾರತೀಯರು ಕೋವಿಡ್ ಪರಿಸ್ಥಿತಿಯಿಂದ ನರಳುತ್ತಿದ್ದೇವೆ. ದುರದೃಷ್ಟವಶಾತ್ ನಮಗೆ ಕೇಂದ್ರ ಸರಕಾರವಿಲ್ಲ. ಸದ್ಯಕ್ಕೆ ನಮಗಿರುವುವುದು ಪಿಆರ್ ಕಂಪನಿ. ಅದಕ್ಕೊಬ್ಬರು ಚುನಾವಣಾ ಪ್ರಚಾರಕರ್ತ. ಅವರು ನಿಷ್ಠುರ, ಲಜ್ಜೆಗೇಡಿತನದಿಂದ ಜನ ಸಮೂಹದ ಮೇಲೆ ದುಃಖ ಹಾಗೂ ವಿನಾಶವನ್ನು ಹೇರುತ್ತಿದ್ದಾರೆ ಎಂದು ಸಿಪಿಎಂ ಟೀಕಿಸಿದೆ.

ದಶಕದಲ್ಲಿಯೇ ಅತ್ಯಂತ ಗಂಭೀರವಾದ ಸ್ಥಿತಿಗೆ ಭಾರತ ಸಾಕ್ಷಿಯಾಗುತ್ತಿದೆ. ಸೇನೆಯ ಮಾಜಿ ಮುಖ್ಯಸ್ಥರು ಇದನ್ನು ಯುದ್ದಕ್ಕೆ ಸಮನಾದುದು ಎಂದು ಬಣ್ಣಿಸುತ್ತಾರೆ. ಸಮಸ್ಯೆಗೆ ಮುಖ್ಯಮಂತ್ರಿಗಳ ಮಾತಿಗೂ ಸಿಗದೆ ಸೋಂಕು ಪ್ರಸಾರವಾಗುವ ಸಭೆಗಳ ಮೂಲಕ ಗಿಮಿಕ್ ಮಾಡುತ್ತಿದ್ದಾರೆ ಎಂದು ಪ್ರಧಾನಿಯನ್ನು ಸಿಪಿಎಂ ತರಾಟೆಗೆ ತೆಗೆದುಕೊಂಡಿದೆ.

ಸೋಂಕು ಸ್ಥಿತಿ ಹಿನ್ನೆಲೆಯಲ್ಲಿ ತಮ್ಮ ಪಕ್ಷ ಪ.ಬಂಗಾಳದಲ್ಲಿ ದೊಡ್ಡ ಸಭೆ ನಡೆಸುವುದಿಲ್ಲ ಎಂದು ಹೇಳಿತ್ತು. ಕಾಂಗ್ರೆಸ್ ಕೂಡ ಇದೇ ನಿಲುವು ತಾಳಿದೆ. ಆದರೆ ಗೃಹ ಮಂತ್ರಿಯೂ ಆಗಿರುವ ಬಿಜೆಪಿ  ನಾಯಕರೊಬ್ಬರು ಅವೈಜ್ಞಾನಿಕವಾಗಿ ವರ್ತಿಸುತ್ತಿದ್ದಾರೆ. ಅವರಿಗೆ ಜನರ ಜೀವಕ್ಕಿಂತಲೂ ಪ್ರಚಾರ ಸಭೆಯೇ ದೊಡ್ಡದೇ? ಎಂದು ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News