ಫೋಟೊ ಕ್ಲಿಕ್ಕಿಸುವ ಸಲುವಾಗಿ ಆಕ್ಸಿಜನ್‌ ಸಿಲಿಂಡರ್‌ ತುಂಬಿದ ಟ್ಯಾಂಕರ್‌ ತಡೆ ಹಿಡಿದ ಬಿಜೆಪಿ ರಾಜಕಾರಣಿಗಳು

Update: 2021-04-18 13:01 GMT

ಭೋಪಾಲ್: ದೇಶದಾದ್ಯಂತ ಕೋವಿಡ್‌ ಪ್ರಕರಣಗಳು 2.5ಲಕ್ಷಕ್ಕೂ ಹೆಚ್ಚು ವರದಿಯಾಗುತ್ತಿದೆ. ಗುಜರಾತ್‌, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಆಸ್ಪತ್ರೆಗಳು ತುಂಬಿ ತುಳುಕಾಡುತ್ತಿದ್ದು, ಆಕ್ಸಿಜನ್‌ ಅಲಭ್ಯತೆಯಿಂದ ಹಲವು ಮಂದಿ ಮೃತಪಟ್ಟಿದ್ದಾರೆ. ಆಕ್ಸಿಜನ್‌ ವ್ಯವಸ್ಥೆ ಮಾಡುವಂತೆ ಹಲವು ಮಂದಿ ಸಾಮಾಜಿಕ ತಾಣಗಳಲ್ಲಿ ಪ್ರಮುಖರ ಮೊರೆ ಹೋಗುತ್ತಿರುವುದು ಕಂಡು ಬರುತ್ತಿದೆ. ಈ ನಡುವೆ ಆಕ್ಸಿಜನ್‌ ಸಿಲಿಂಡರ್‌ ಹೇರಿಕೊಂಡು ಬಂದಿದ್ದ ಟ್ಯಾಂಕರ್‌ ಅನ್ನು ಫೊಟೊ ಕ್ಲಿಕ್ಕಿಸಲೆಂದು ಬಿಜೆಪಿಯ ರಾಜಕಾರಣಿಗಳು ತಡೆದು ನಿಲ್ಲಿಸಿದ ಘಟನೆ ಭೋಪಾಲ್‌ ನಲ್ಲಿ ನಡೆದಿದೆ. 

ಇಂಧೋರ್‌ ನಲ್ಲಿ ತೀವ್ರ ಆಕ್ಸಿಜನ್‌ ಕೊರತೆ ಉಂಟಾಗಿದ್ದು, ಗುಜರಾತ್‌ ನಿಂದ 30 ಟನ್‌ ಗಳಷ್ಟು ಆಕ್ಸಿಜನ್‌ ಅನ್ನು ಟ್ಯಾಂಕರ್‌ ಮೂಲಕ ತರಿಸಲಾಗಿತ್ತು. ಸುಮಾರು 700ಕಿ.ಮೀ ದೂರವನ್ನು ಕ್ರಮಿಸಿದ್ದ ಟ್ಯಾಂಕರ್‌ ಚಾಲಕ ಆಕ್ಸಿಜನ್‌ ನ ಬೇಡಿಕೆಯ ಮಹತ್ವವರಿತು ಸರಿಯಾಗಿ ನಿದ್ದೆಯೂ ಮಾಡದೇ ವಾಹನ ಚಲಾಯಿಸಿಕೊಂಡು ಬಂದಿದ್ದರು. ಆದರೆ ಈ ಆಕ್ಸಿಜನ್‌ ಪೂರೈಕೆ ಮಾಡಿದ್ದು ನಾವೇ ಎಂಬ ಪ್ರಚಾರ ಪಡೆಯುವ ಸಲುವಾಗಿ ಬಿಜೆಪಿ ಪಕ್ಷದ ನಾಯಕರು ಎರಡು ಬಾರಿ ವಾಹನವನ್ನು ನಿಲಿಸಿದ್ದಾರೆ ಎಂದು timesofindia.com ವರದಿ ತಿಳಿಸಿದೆ.

ಸುಮಾರು ೨ ಗಂಟೆಗಳಿಗೂ ಹೆಚ್ಚು ಕಾಲ ಮಾಧ್ಯಮಗಳನ್ನು ಕರೆಸಿ, ಫೋಟೊಗಳನ್ನು ಕ್ಲಿಕ್ಕಿಸಿದ ಬಳಿಕ ಟ್ಯಾಂಕರ್‌ ನಿಂದ ಆಕ್ಸಿಜನ್‌ ಗಳನ್ನು ಸರಿಯಾದ ಸ್ಥಳಗಳಿಗೆ ತಲುಪಿಸಲು ಅನುಮತಿ ನೀಡಲಾಯಿತು ಎಂದು ವರದಿ ತಿಳಿಸಿದೆ. ಈ ಕುರಿತು ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News