ಕುಂಭಮೇಳದಿಂದ ಅಹ್ಮದಾಬಾದ್‌ಗೆ ಮರಳಿದ 34 ಜನರಿಗೆ ಕೊರೋನ ಪಾಸಿಟಿವ್

Update: 2021-04-18 16:19 GMT

ಅಹ್ಮದಾಬಾದ್,ಎ.18: ಹರಿದ್ವಾರದ ಕುಂಭಮೇಳದಿಂದ ಗುಜರಾತಿಗೆ ವಾಪಸಾಗುವವರು ತಮ್ಮ ನಗರಗಳು ಮತ್ತು ಗ್ರಾಮಗಳನ್ನು ಪ್ರವೇಶಿಸುವ ಮೊದಲು ಆರ್‌ಟಿ-ಪಿಸಿಆರ್ ಪರೀಕ್ಷೆಗೊಳಗಾಗಬೇಕು ಎಂದು ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಪ್ರಕಟಿಸಿದ ದಿನವೇ ಹರಿದ್ವಾರದಿಂದ ಅಹ್ಮದಾಬಾದ್‌ನ ಸಾಬರಮತಿ ರೈಲು ನಿಲ್ದಾಣಕ್ಕೆ ಬಂದಿಳಿದ 313 ಕುಂಭಮೇಳ ಯಾತ್ರಿಗಳ ಪೈಕಿ ಕನಿಷ್ಠ ಶೇ.11ರಷ್ಟು ಜನರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ.

ರವಿವಾರ ಬೆಳಿಗ್ಗೆ ಜಾಮ್‌ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೂಪಾನಿ,ಕುಂಭಮೇಳದಿಂದ ಹಿಂದಿರುಗುವವರ ಮೇಲೆ ನಿಗಾ ಇರಿಸುವಂತೆ ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗದೆ ಅವರು ತಮ್ಮ ಊರುಗಳಿಗೆ ತೆರಳುವುದನ್ನು ತಡೆಯಲು ನಾಕಾಬಂದಿಯನ್ನು ಜಾರಿಗೊಳಿಸುವಂತೆ ಎಲ್ಲ ಜಿಲ್ಲಾಡಳಿತಗಳಿಗೆ ನಿರ್ದೇಶ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರಕಾರದ ನಿರ್ದೇಶದ ಮೇರೆಗೆ ಪಶ್ಚಿಮ ರೈಲ್ವೆ ಮತ್ತು ಅಹ್ಮದಾಬಾದ್ ಮಹಾನಗರ ಪಾಲಿಕೆ ಸಾಬರಮತಿ ರೈಲು ನಿಲ್ದಾಣದಲ್ಲಿ ವಿಶೇಷ ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿವೆ. ಹರಿದ್ವಾರದಿಂದ ಮರಳಿದ 313 ಯಾತ್ರಿಗಳ ಪೈಕಿ 34 ಜನರಲ್ಲಿ ಸೋಂಕು ಪತ್ತೆಯಾಗಿದ್ದು,ಅವರನ್ನು ಮಹಾನಗರ ಪಾಲಿಕೆಯ ಸಮ್ರಾಸ್ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ಗೊಳಪಡಿಸಲಾಗಿದೆ.

ಯೋಗ ಎಕ್ಸ್‌ಪ್ರೆಸ್ ರೈಲು ಮಾತ್ರ ಅಹ್ಮದಾಬಾದ್ ಮತ್ತು ಹರಿದ್ವಾರಗಳ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ.

ಸಾಬರಮತಿ ನಿಲ್ದಾಣದಲ್ಲಿ ನಡೆಸಲಾಗುತ್ತಿರುವ ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಯು ಸರಕಾರವು ಸೂಚಿಸಿರುವ ಆರ್‌ಟಿ-ಪಿಸಿಆರ್‌ಗಿಂತ ಭಿನ್ನವಾಗಿದೆ. ಆರ್‌ಟಿ-ಪಿಸಿಆರ್ ಹೆಚ್ಚು ನಿಖರವಾಗಿದ್ದರೂ,ಫಲಿತಾಂಶ ದೊರೆಯಲು ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಲಕ್ಷಣಗಳನ್ನು ಹೊಂದಿರಬಹುದಾದ ಇನ್ನೂ ಶೇ.10ರಿಂದ ಶೇ.15ರಷ್ಟು ಪ್ರಯಾಣಿಕರಿದ್ದಾರೆ,ಆದರೆ ಅವರು ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಗೆ ಪಾಸಿಟಿವ್ ಆಗಿರದಿರಬಹುದು. ಅವರು ಆರ್‌ಟಿ-ಪಿಸಿಆರ್ ಪರೀಕ್ಷೆಗೊಳಗಾದ ಬಳಿಕವೇ ಅವರ ಅಹ್ಮದಾಬಾದ್ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಮಹಾನಗರ ಪಾಲಿಕೆಯ ಅಧಿಕಾರಿಯೋರ್ವರು ತಿಳಿಸಿದರು.

ಅತ್ತ ಸೂರತ್‌ನಲ್ಲಿ ರವಿವಾರ ಕುಂಭಮೇಳದಿಂದ ಮರಳಿದ 300ಕ್ಕೂ ಅಧಿಕ ಜನರ ಪೈಕಿ 13 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಗುಜರಾತಿ ಮಾಧ್ಯಮವೊಂದು ವರದಿಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News