ಸೋಂಕಿನ ಎರಡನೇ ಅಲೆಯಿಂದ ಆರ್ಥಿಕ ಅನಿಶ್ಚಿತತೆ: ನೀತಿ ಆಯೋಗ

Update: 2021-04-18 17:33 GMT

ಹೊಸದಿಲ್ಲಿ, ಎ.18: ಕೊರೋನ ವೈರಸ್ ಸೋಂಕಿನ ಎರಡನೇ ಅಲೆಯಿಂದಾಗಿ ಗ್ರಾಹಕರು ಮತ್ತು ಹೂಡಿಕೆದಾರರ ಅಭಿಪ್ರಾಯದ ವಿಷಯದಲ್ಲಿ ದೇಶ ಹೆಚ್ಚಿನ ಅನಿಶ್ಚಿತತೆಗೆ ಸಿದ್ಧವಾಗಬೇಕಿದೆ ಮತ್ತು ಅಗತ್ಯಬಿದ್ದಾಗ ಸರಕಾರ ಆರ್ಥಿಕ ಉಪಕ್ರಮಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

ಕೊರೋನ ಸೋಂಕು ಪ್ರಕರಣ ಹೆಚ್ಚುತ್ತಿರುವುದಿಂದಾಗಿ ಈಗಿನ ಪರಿಸ್ಥಿತಿ ಈ ಹಿಂದಿನದಕ್ಕಿಂತ ಬಹಳಷ್ಟು ಕಠಿಣವಾಗಿದೆ. ಆದರೂ 2022ರ ಮಾರ್ಚ್ 31ಕ್ಕೆ ಅಂತ್ಯವಾಗುವ ಹಾಲಿ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ 11%ದಷ್ಟು ಪ್ರಗತಿ ಹೊಂದುವ ನಿರೀಕ್ಷೆಯಿದೆ ಎಂದು ಕುಮಾರ್ ಹೇಳಿದ್ದಾರೆ.

ಕೊರೋನ ಸೋಂಕಿನ ವಿರುದ್ಧದ ಯುದ್ಧದಲ್ಲಿ ಭಾರತ ಸಂಪೂರ್ಣ ಯಶ ಪಡೆಯುವ ಹಂತಕ್ಕೆ ತಲುಪಿತ್ತು. ಆದರೆ ಬ್ರಿಟನ್ ಮತ್ತು ಇತರ ಕೆಲ ದೇಶಗಳಿಂದ ಬಂದಿರುವ ಸೋಂಕಿನ ಹೊಸ ತಳಿಯು ಪರಿಸ್ಥಿತಿಯನ್ನು ಕಠಿಣವಾಗಿಸಿದೆ. ಸೇವಾ ಕ್ಷೇತ್ರಗಳಂತಹ ಕೆಲವು ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರುವ ಜೊತೆಗೆ, ದ್ವಿತೀಯ ಅಲೆಯು ಆರ್ಥಿಕತೆಯಲ್ಲಿರುವ ಅನಿಶ್ಚಿತತೆಯನ್ನು ವೃದ್ಧಿಸಿದ್ದು ಇದು ಆರ್ಥಿಕ ಚಟುವಟಿಕೆಗಳ ಮೇಲೆ ವ್ಯಾಪಕ ಪರೋಕ್ಷ ಪರಿಣಾಮಕ್ಕೆ ಕಾರಣವಾಗಬಹುದು. ಆದ್ದರಿಂದ ಆರ್ಥಿಕ ಕ್ಷೇತ್ರದ ಮೇಲಾಗುವ ಅನಿಶ್ಚಿತತೆಗೆ ನಾವು ಸಿದ್ಧರಾಗಬೇಕಿದೆ ಎಂದರು.

ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರಕಾರ ಹೊಸ ಆರ್ಥಿಕ ಪ್ಯಾಕೇಜ್ ಘೋಷಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೊರೋನ ಸೋಂಕಿನ ಎರಡನೇ ಅಲೆಯಿಂದ ಉಂಟಾಗುವ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳ ಬಗ್ಗೆ ಕೇಂದ್ರದ ವಿತ್ತ ಸಚಿವಾಲಯ ವಿಶ್ಲೇಷಣೆ ನಡೆಸಿದ ಬಳಿಕ ಈ ಪ್ರಶ್ನೆಗೆ ಉತ್ತರ ದೊರಕಲಿದೆ ಎಂದರು. ಆರ್‌ಬಿಐ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದೇ ರೀತಿ ಅಗತ್ಯವಿದ್ದಾಗ ಸರಕಾರವೂ ಕೆಲವು ಉಪಕ್ರಮಗಳ ಮೂಲಕ ಪ್ರತಿಕ್ರಿಯಿಸಬಹುದು ಎಂದು ರಾಜೀವ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News