ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಕೋವಿಡ್-19ಗೆ ಬಲಿಯಾದ ಹಿರಿಯ ಪತ್ರಕರ್ತ

Update: 2021-04-19 04:43 GMT
Photo:  The Print

ಲಕ್ನೊ: ಉತ್ತರ ಪ್ರದೇಶದ ಹಿರಿಯ ಪತ್ರಕರ್ತ ವಿನಯ್ ಶ್ರೀವಾಸ್ತವ ಅವರಿಗೆ ಕೋವಿಡ್-19 ರೋಗ ಲಕ್ಷಣ ಕಾಣಿಸಿಕೊಂಡ ಬಳಿಕ ಮೂರು ಆಸ್ಪತ್ರೆಗಳಿಗೆ ತೆರಳಿದರೂ ಚಿಕಿತ್ಸೆ ಲಭಿಸದೇ ಆಮ್ಲಜನಕ ಮಟ್ಟ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ.

ಸರಕಾರದ ನಿರ್ದೇಶನದ ಪ್ರಕಾರ ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ಕಡ್ಡಾಯ ಪತ್ರವನ್ನು ನೀಡಲು ಬೇಡಿಕೆ ಇಡುತ್ತಿವೆ. ಆ ಪತ್ರವನ್ನು ಪಡೆಯಬೇಕಾದರೆ ಲಕ್ನೋದ ಲಾಲ್ ಬಾಗ್ ಪ್ರದೇಶದಲ್ಲಿರುವ  ಮುಖ್ಯ ವೈದ್ಯಕೀಯ ಅಧಿಕಾರಿ(ಸಿಎಂಒ)ಕಚೇರಿಗೆ ತೆರಳಬೇಕು. ವಿನಯ್ ಅವರ ಪುತ್ರ ಹರ್ಷಿತ್ ಸಿಎಂಒ ಕಚೇರಿಯಲ್ಲಿದ್ದಾಗ ಅವರ ತಂದೆಯ ಆಮ್ಲಜನಕ ಮಟ್ಟ ಸಾಮಾನ್ಯಕ್ಕಿಂತ(95)50ಕ್ಕೆ ಕುಸಿದಿದೆ ಎಂದು ಮನೆಯಿಂದ ಕರೆ ಬಂತು. ಹರ್ಷಿತ್  ಸಿಎಂಒ ಕಚೇರಿಯ ಹೊರಗೆ ಕಡ್ಡಾಯ ಪತ್ರಕ್ಕಾಗಿ ಕಾದು ಸುಸ್ತಾಗಿ ಮನೆಗೆ ನಿರಾಶೆಯಿಂದ ವಾಪಸಾದಾಗ ತಂದೆಯ ಆಮ್ಲಜನಕ ಮಟ್ಟ 30ಕ್ಕೆ ಇಳಿದಿತ್ತು. ವಿನಯ್ ವೈದ್ಯಕೀಯ ಆರೈಕೆಯ ಪಡೆಯದೇ ಮಧ್ಯಾಹ್ನ ನಿಧನರಾದರು.

ಹಿರಿಯ ಪತ್ರಕರ್ತ ವಿನಯ್ ಅವರಿಗೆ ರಾತ್ರಿಯ ಹೊತ್ತಿಗೆ ಆಮ್ಲಜನಕ ಮಟ್ಟ ಇಳಿಲಾರಂಭಿಸಿದವು. ರೋಗ ಲಕ್ಷಣಗಳು ಕೋವಿಡ್ ಅನ್ನು ಸೂಚಿಸುತ್ತಿತ್ತು.

ನಮಗೆ  ಆಮ್ಲಜನಕ ಸಿಲಿಂಡರ್ ಸಿಗಲಿಲ್ಲ. ಸಂಬಂಧಿಯೊಬ್ಬರು ನಮಗೆ ತಮ್ಮದೇ ಆದ ಸಿಲಿಂಡರ್ ನೀಡಿದರು. ನಾನು ಮಧ್ಯರಾತ್ರಿಯಲ್ಲಿ ಅದನ್ನು ಪುನಃ ತುಂಬಿಸಲು ಹೋದೆ. ಅಲ್ಲೂ ಕೂಡ  ದೀರ್ಘ ಸರತಿ ಸಾಲು ಇತ್ತು, ನನ್ನ ತಂದೆಯನ್ನು ಉಳಿಸಲು ನಾನು ಇತರರೊಂದಿಗೆ ಹೋರಾಡಬೇಕಾಯಿತು. ನನ್ನ ತಂದೆಯ ಸ್ಯಾಂಪಲ್ ಅನ್ನು ಶನಿವಾರ ಬೆಳಿಗ್ಗೆ ಸಂಗ್ರಹಿಸಲಾಗಿದೆ, ಆದರೆ ನಾವು ಮೂರು ದಿನಗಳ ನಂತರವೇ ಫಲಿತಾಂಶಗಳನ್ನು ಪಡೆಯುತ್ತೇವೆ. ಕೋವಿಡ್ ಪಾಸಿಟಿವ್ ವರದಿಯಿಲ್ಲದೆ ಯಾವುದೇ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳುವುದಿಲ್ಲ.  ತಂದೆಗೆ ರೋಗದ ಎಲ್ಲಾ ಲಕ್ಷಣಗಳಿದ್ದರೂ ಸಹ ಅವರನ್ನು ಆಸ್ಪತ್ರೆಗಳು ದಾಖಲಿಸಿಕೊಳ್ಳಲಿಲ್ಲ ಎಂದು ಹರ್ಷಿತ್ ಬೇಸರ ವ್ಯಕ್ತಪಡಿಸಿದರು.

ವಿನಯ್ ಶ್ರೀವಾಸ್ತವ ತನ್ನ ಸುತ್ತಮುತ್ತಲಿನವರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧವಿರುತ್ತಿದ್ದರು., ಆದರೆ ಅವರು ಚಿಕಿತ್ಸೆ ಸಿಗದೆ ಮನೆಯಲ್ಲಿಯೇ ಮೃತಪಟ್ಟಾಗ ರೋಗಕ್ಕೆ ತುತ್ತಾಗುವ ಭಯದಿಂದಾಗಿ ಯಾರೂ ಅವರ ಕುಟುಂಬವನ್ನು ಸಮಾಧಾನಪಡಿಸಲು ಮುಂದಾಗಲಿಲ್ಲ.

ನನ್ನ ತಂದೆ ಕಳೆದ 30 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಅವರು ಯಾವಾಗಲೂ ತಮ್ಮ ವೃತ್ತಿಜೀವನದುದ್ದಕ್ಕೂ ಜನರಿಗೆ ಸಹಾಯ ಮಾಡಿದರು. ಸಾಂಕ್ರಾಮಿಕ ಸಮಯದಲ್ಲಿ ತೊಂದರೆಯಲ್ಲಿರುವವರಿಗೆ ಸಹಾಯ ಮಾಡಲು ಅವರ ಎಲ್ಲಾ ಗಳಿಕೆಯನ್ನು ಕಳೆದುಕೊಂಡರು. ಆದರೆ ಅವರು ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿರುವಾಗ ಯಾರೂ ಅವರ ಸಹಾಯಕ್ಕೆ ಬರಲಿಲ್ಲ ಎಂದು ಹರ್ಷಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News