ಕೋವಿಡ್: ದೇಶದಲ್ಲಿ ಒಂದೇ ದಿನ 1,600ಕ್ಕೂ ಅಧಿಕ ಸೋಂಕಿತರು ಮೃತ್ಯು

Update: 2021-04-19 03:57 GMT

ಹೊಸದಿಲ್ಲಿ, ಎ.19: ದೇಶದಲ್ಲಿ ಒಂದೇ ದಿನ 2.75 ಲಕ್ಷಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 1,622 ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ದೇಶದ ಕೋವಿಡ್-19 ಧನಾತ್ಮಕತೆ ದರ ಇದುವರೆಗಿನ ಗರಿಷ್ಠ ಮಟ್ಟವನ್ನು ತಲುಪಿದ್ದು, ಕೇವಲ ಎರಡು ವಾರಗಳಲ್ಲಿ ದ್ವಿಗುಣಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಪ್ರಮುಖ ಔಷಧಿಗಳು ಮತ್ತು ಆಮ್ಲಜನಕದ ಕೊರತೆ ಬಗ್ಗೆ ಹಾಹಾಕಾರ ಎದ್ದಿದ್ದು, ಎರಡನೇ ಅಲೆ ತನ್ನ ಕರಾಳಹಸ್ತವನ್ನು ಮತ್ತಷ್ಟು ಚಾಚುತ್ತಲೇ ಇದೆ.

ದೇಶದಲ್ಲಿ ರವಿವಾರ 2,75,482 ಹೊಸ ಪ್ರಕರಣಗಳು ವರದಿಯಾಗಿದ್ದು, ದೃಢಪಟ್ಟ ಪ್ರಕರಣಗಳ ಸಂಖ್ಯೆ 1.5 ಕೋಟಿಯ ಗಡಿದಾಟಿದೆ. ಒಂದೇ ದಿನ ಇದುವರೆಗಿನ ಗರಿಷ್ಠ ಅಂದರೆ 1,622 ಸೋಂಕಿತರು ಮೃತಪಟ್ಟಿದ್ದಾರೆ.

ತಪಾಸಣೆ ನಡೆಸಿದ ಒಟ್ಟು ಮಾದರಿಗಳಿಗೆ ಹೋಲಿಸಿದರೆ ಧನಾತ್ಮಕತೆ ದರ (ಟಿಪಿಆರ್) 16.7% ಇದ್ದು, ಸಾಪ್ತಾಹಿಕ ಸರಾಸರಿ 14.3%ಕ್ಕೇರಿದೆ. ಇದುವರೆಗಿನ ಗರಿಷ್ಠ ಧನಾತ್ಮಕತೆ ದರ 15.7% 2020ರ ಜುಲೈ 19ರಂದು ದಾಖಲಾಗಿತ್ತು. ಅಂತೆಯೇ ಸಾಪ್ತಾಹಿಕ ಸರಾಸರಿ ಧನಾತ್ಮಕತೆ ದರ 12.5% ಜುಲೈ 15ರಂದು ದಾಖಲಾಗಿತ್ತು.

16.7% ಧನಾತ್ಮಕತೆ ದರ ಎಂದರೆ ತಪಾಸಣೆಗೆ ಒಳಪಡಿಸಿದ ಪ್ರತಿ ಆರು ಮಾದರಿಗಳ ಪೈಕಿ ಒಂದು ಪಾಸಿಟಿವ್ ಪ್ರಕರಣಗಳಿವೆ. ಇದು ಭಾರತದಂಥ ದೊಡ್ಡ ದೇಶಗಳಲ್ಲಿ ಅತ್ಯಧಿಕ ಪ್ರಮಾಣವಾಗಿದೆ. ಛತ್ತೀಸ್‌ಗಢ, ದಿಲ್ಲಿ ಹಾಗೂ ಗೋವಾದಂಥ ರಾಜ್ಯಗಳಲ್ಲಿ ಪ್ರತಿ ಮೂರು ಮಾದರಿಗಳ ಪೈಕಿ ಒಂದು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಪ್ರತಿ ನಾಲ್ಕರ ಪೈಕಿ ಒಂದು ಮಾದರಿ ಪಾಸಿಟಿವ್ ಬರುತ್ತಿದೆ. ಛತ್ತೀಸ್‌ಗಢದಲ್ಲಿ ಅತ್ಯಧಿಕ ಅಂದರೆ 30.4% ಧನಾತ್ಮಕತೆ ದರ ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಈ ವರ್ಗಾವಣೆ ಸರಪಣಿಯನ್ನು ತುಂಡರಿಸುವುದು ಅಗತ್ಯ ಎನ್ನುವುದು ತಜ್ಞರ ಅಭಿಮತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News