ಐದು ನಗರಗಳಲ್ಲಿ ಲಾಕ್ ಡೌನ್ ಹೇರಲು ಉತ್ತರಪ್ರದೇಶ ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶ

Update: 2021-04-19 12:44 GMT

ಲಕ್ನೊ: ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಪ್ರಿಲ್ 26 ರ ತನಕ ಪ್ರಯಾಗ್ ರಾಜ್, ಲಕ್ನೊ, ವಾರಣಾಸಿ, ಕಾನ್ಪುರ ಹಾಗೂ ಗೋರಖ್‌ಪುರ ನಗರಗಳಲ್ಲಿ ಖಾಸಗಿ ಅಥವಾ ಸರ್ಕಾರಿ ಸ್ವಾಮ್ಯದ ಎಲ್ಲಾ ಸಂಸ್ಥೆಗಳನ್ನು ಮುಚ್ಚುವಂತೆ ಅಲಹಾಬಾದ್ ಹೈಕೋರ್ಟ್ ಸೋಮವಾರ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಆದಾಗ್ಯೂ, ಅಗತ್ಯ ಸೇವೆಗಳನ್ನು ಪೂರೈಕೆ ಮಾಡುವವರಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಹಣಕಾಸು ಸಂಸ್ಥೆಗಳು, ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳು, ಕೈಗಾರಿಕಾ ಮತ್ತು ವೈಜ್ಞಾನಿಕ ಸಂಸ್ಥೆಗಳು, ಪುರಸಭೆಯ ಕಾರ್ಯಗಳು ಹಾಗೂ ಸಾರ್ವಜನಿಕ ಸಾರಿಗೆ ಸೇರಿದಂತೆ ಅಗತ್ಯ ಸೇವೆಗಳನ್ನು ಈ ನಗರಗಳಲ್ಲಿ ವಿನಾಯಿತಿ ನೀಡಲಾಗುವುದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಮೂರಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಎಲ್ಲಾ ಕಿರಾಣಿ ಮತ್ತು ಇತರ ವಾಣಿಜ್ಯ ಅಂಗಡಿಗಳು ಎಪ್ರಿಲ್ 26 ರವರೆಗೆ ಮುಚ್ಚಲ್ಪಡುತ್ತವೆ. ಆದಾಗ್ಯೂ, ಈ ಅವಧಿಯಲ್ಲಿ ಔಷಧ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ಮುಂದುವರಿಸಲಾಗುವುದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.

ಧಾರ್ಮಿಕ ಚಟುವಟಿಕೆಗಳು ಹಾಗೂ  ವಿವಾಹಗಳನ್ನು ರದ್ದು ಗೊಳಿಸಲಾಗುವುದು. ಆದಾಗ್ಯೂ, ಈಗಾಗಲೇ ವಿವಾಹವನ್ನು ನಿಗದಿಪಡಿಸಿದರೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಅನುಮತಿ ಅಗತ್ಯವಾಗಿರುತ್ತದೆ. ಅಂತಹ ವಿವಾಹಗಳಲ್ಲಿ ಜನ ಸೇರುವಿಕೆಯನ್ನು 25 ಕ್ಕೆ ಸೀಮಿತಗೊಳಿಸಲಾಗುತ್ತದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News