ಮಹಾರಾಷ್ಟ್ರದಲ್ಲಿ ರೆಮ್ಡೆಸಿವಿರ್ ವಿಚಾರದಲ್ಲಿ ಬಿಜೆಪಿ ಹೇಗೆ ಶಾಮೀಲಾಯಿತೆಂದು ತಿಳಿದಿಲ್ಲ ಎಂದ ಎಫ್‍ಡಿಎ ಮೂಲಗಳು

Update: 2021-04-19 12:57 GMT

ಮುಂಬೈ: ರೆಮ್ಡೆಸಿವಿರ್ ಔಷಧಿ  ಪೂರೈಕೆ ವಿಚಾರದಲ್ಲಿ ಮಹಾರಾಷ್ಟ್ರ ಬಿಜೆಪಿ ನಾಯಕರುಗಳಾದ ದೇವೇಂದ್ರ ಫಢ್ನವೀಸ್ ಹಾಗೂ ಪ್ರವೀಣ್ ದರೇಕರ್ ಹೇಗೆ ಶಾಮೀಲಾದರೆಂಬ ಕುರಿತು ತಮಗೆ  ಏನೂ ತಿಳಿದಿಲ್ಲ ಎಂದು ಫುಡ್ ಎಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಶನ್ (ಎಫ್‍ಡಿಎ) ಮೂಲಗಳು ತಿಳಿಸಿವೆ.

ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸುವ ಈ ಔಷಧಿಯ ಅಕ್ರಮ ದಾಸ್ತಾನು ಹಾಗೂ  ಅದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಆರೋಪಗಳ ಕುರಿತಂತೆ ಮುಂಬೈ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ.

ಬಿಜೆಪಿ ಅಥವಾ ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಈ ಔಷಧಿ  ತರಿಸಲು ಅನುಮತಿಯನ್ನು ನೀಡಲಾಗಿಲ್ಲ ಎಂದು   ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳು ರೆಮ್ಡೆಸೆವಿರ್ ಔಷಧಿ ಪೂರೈಕೆಗಾಗಿ  ಪರದಾಡುತ್ತಿರುವ ಸಂದರ್ಭ ಎಫ್‍ಡಿಎ ಹೇಳಿದೆ.

ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಬಳಕೆಗಾಗಿ ರೆಮ್ಡೆಸೆವಿರ್ ಔಷಧಿಯನ್ನು ಪಡೆಯಲು  ರಾಜ್ಯ ಸರಕಾರ ನಡೆಸುತ್ತಿರುವ ಯತ್ನಗಳಿಗೆ ಬಿಜೆಪಿ ಅಡ್ಡಿಯುಂಟು ಮಾಡುತ್ತಿದೆ ಎಂದು ರವಿವಾರ ರಾಜ್ಯ  ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಹಾಗೂ ಎನ್‍ಸಿಪಿ ವಕ್ತಾರ ನವಾಬ್ ಮಲಿಕ್ ಆರೋಪಿಸಿದ್ದರು.

ಈ ಔಷಧಿಯ ದಾಸ್ತಾನುಗಳನ್ನು ಬೇರೆ ಕಡೆಗೆ ಪೂರೈಸಲು ಯತ್ನಿಸುತ್ತಿದ್ದಾರೆಂಬ ಶಂಕೆಯಿಂದ ಪೊಲೀಸರು ಫಾರ್ಮಾ ಕಂಪೆನಿಯೊಂದರ ಮಾಲಿಕ ಸಹಿತ ಇಬ್ಬರನ್ನು  ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಹಾಗೂ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಕೋರಿ  ಶನಿವಾರ ರಾತ್ರಿ ಫಡ್ನವೀಸ್ ಹಾಗೂ ದರೇಕರ್ ಪೊಲೀಸರ ಜತೆ ವಾಗ್ವಾದಕ್ಕಿಳಿದಿದ್ದರು.

ಸುಮಾರು 60,000 ವಯಲ್ ರೆಮ್ಡೆಸೆವಿರ್ ಔಷಧಿಯ ಸಾಗಾಟ ಕುರಿತಂತೆ ಪೊಲೀಸರಿಗೆ ಮಾಹಿತಿ ದೊರಕಿದ ನಂತರ ಬ್ರಕ್ ಫಾರ್ಮಾ ಮಾಲಕ ರಾಜೇಶ್ ದೊಕನಿಯಾ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಆದರೆ ಫಡ್ನವೀಸ್ ಹಾಗೂ ದರೇಕರ್ ಅವರ ಹಸ್ತಕ್ಷೇಪದಿಂದಾಗಿ ತನಿಖೆ ಅಪೂರ್ಣವಾಗಿದೆ ಹಾಗೂ ಈ ಔಷಧಿ ಎಲ್ಲಿದೆ ಎಂದು ತಿಳಿಯುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ  ಮಹಾರಾಷ್ಟ್ರಕ್ಕೆ ಈ ಔಷಧಿ ಪೂರೈಸಲು ಎಫ್‍ಡಿಎ 12 ದೊಡ್ಡ ಫಾರ್ಮಾ ಕಂಪೆನಿಗಳನ್ನು ಸಂಪರ್ಕಿಸಿತ್ತು. ಈ ಪೈಕಿ ಬಿಡಿಆರ್ ಫಾರ್ಮಾ ಹಾಗೂ ಬ್ರಕ್ ಮೊದಲು  ಪ್ರತಿಕ್ರಿಯೆ ನೀಡಿದ್ದವು. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಬ್ರಕ್ ಕಂಪೆನಿ ಮಹಾರಾಷ್ಟ್ರಕ್ಕೆ ಔಷಧಿ ಪೂರೈಸಬೇಕಿದ್ದರೂ ಪೂರೈಕೆಯಾಗಿರಲಿಲ್ಲ.

ರಾಜ್ಯದ ಅಗತ್ಯತೆಗಳಿಗಾಗಿ ಬಿಜೆಪಿ ರಾಜ್ಯ ಘಟಕ ಫಾರ್ಮಾ ಕಂಪೆನಿಗಳನ್ನು ಸಂಪರ್ಕಿಸಿತ್ತು ಎಂಡು ಫಡ್ನವೀಸ್ ಹೇಳಿಕೊಂಡಿದ್ದಾರೆ. ತರುವಾಯ ಈ ಪ್ರಕರಣದಲ್ಲಿ ಶಾಮೀಲಾದ ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ರಾಜ್ಯ ಸರಕಾರ ಯೋಚಿಸುತ್ತಿದೆ. ಆದರೆ  ಬೆದರಿಕೆಗಳಿಗೆ  ತಾವು ಭಯ ಪಡುವುದಿಲ್ಲ ಎಂದು ಫಡ್ನವೀಸ್ ಹೇಳಿದ್ದಾರೆ.

ಇನ್ನೊಂದೆಡೆ ಪೊಲೀಸರು ಗುಜರಾತ್‍ನಲ್ಲಿ ಬ್ರಕ್ ಫಾರ್ಮಾ ಅಧಿಕಾರಿ ಹಾಗೂ ಇನ್ನೊಬ್ಬನನ್ನು  ಕಾಳಸಂತೆಯಲ್ಲಿ ಈ ಔಷಧಿ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಈ ಕುರಿತು ಬಿಜೆಪಿ ಇನ್ನೂ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News