"ಕಾಂಗ್ರೆಸ್‌ ನಾಯಕರು ದೇಶದ ಜನತೆಯ ಜೀವಗಳೊಂದಿಗೆ ಆಟವಾಡುತ್ತಿದ್ದಾರೆ"

Update: 2021-04-19 15:48 GMT
photo:twitter(@drharshvardhan)

ಹೊಸದಿಲ್ಲಿ,ಎ.19: ಕೋವಿಡ್-19 ವಿರುದ್ಧ ಲಸಿಕೆ ನೀಡಿಕೆ ಪ್ರಯತ್ನಗಳನ್ನು ಚುರುಕುಗೊಳಿಸುವಂತೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿರುವ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ವಿರುದ್ಧ ತೀವ್ರ ದಾಳಿ ನಡೆಸಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು, ದೇಶದಲ್ಲಿ ‘ಲಸಿಕೆ ಹಿಂಜರಿಕೆ ’ಯ ಹಿಂದೆ ಕಾಂಗ್ರೆಸ್ ನಾಯಕರ ಹೇಳಿಕೆಗಳಿವೆ ಮತ್ತು ದೇಶದಲ್ಲಿ ಎರಡನೇ ಅಲೆ ಹೆಚ್ಚುವಲ್ಲಿ ಕಾಂಗ್ರೆಸ್ ಆಡಳಿತದ ರಾಜ್ಯಗಳ ಪಾಲು ದೊಡ್ಡದಿದೆ ಎಂದು ಆರೋಪಿಸಿದರು.

ಲಸಿಕೆ ನೀಡಿಕೆ ಪ್ರಯತ್ನಗಳನ್ನು ಹೆಚ್ಚಿಸುವಂತೆ,ಯಾರಿಗೆ ಲಸಿಕೆ ಅಗತ್ಯವಿದೆ ಎಂಬ ಬಗ್ಗೆ ನಿರ್ಧಾರವನ್ನು ರಾಜ್ಯಗಳಿಗೆ ಬಿಡುವಂತೆ ಮತ್ತು ತುರ್ತು ಅನುಮತಿಗಳನ್ನು ನೀಡುವ ಮೂಲಕ ಲಸಿಕೆ ಉತ್ಪಾದಕರ ಸಂಖ್ಯೆಯನ್ನು ಹೆಚ್ಚಿಸುವಂತೆ ಮನಮೋಹನ ಸಿಂಗ್ ಅವರು ರವಿವಾರದ ತನ್ನ ಪತ್ರದಲ್ಲಿ ಸಲಹೆಗಳನ್ನು ನೀಡಿದ್ದರು.

ಪತ್ರಕ್ಕೆ ಪ್ರತಿಕ್ರಿಯಿಸಿದ ಹರ್ಷವರ್ಧನ್,ಮಾಜಿ ಪ್ರಧಾನಿಯವರು ಲಸಿಕೆಯ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದಾರಾದರೂ ಅವರ ಕಾಂಗ್ರೆಸ್ ಪಕ್ಷವು ಇಂತಹ ಅಭಿಪ್ರಾಯವನ್ನು ಹಂಚಿಕೊಂಡಿಲ್ಲ,ಆದರೆ ಲಸಿಕೆಯ ಬಗ್ಗೆ ಋಣಾತ್ಮಕತೆಯನ್ನು ಹರಡುತ್ತಿದೆ ಎಂದರು.

ಅತ್ಯಂತ ಸವಾಲಿನ ಸಮಯದಲ್ಲಿ ಲಸಿಕೆಗಳನ್ನು ಅಭಿವೃದ್ಧಿಗೊಳಿಸಿರುವ ಭಾರತೀಯ ವಿಜ್ಞಾನಿಗಳಿಗೆ ಯಾವುದೇ ಹಿರಿಯ ಕಾಂಗ್ರೆಸ್ ನಾಯಕರು ಕೃತಜ್ಞತೆಯನ್ನೂ ಸಲ್ಲಿಸಿಲ್ಲ ಎನ್ನುವುದು ಆಘಾತಕಾರಿಯಾಗಿದೆ ಎಂದ ಅವರು,ವಿಜ್ಞಾನಿಗಳಿಗೆ ಕೃತಜ್ಞತೆ ಹೇಳುವುದು ಹೋಗಲಿ, ಹಲವು ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರಗಳು ಈ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಸುಳ್ಳುಗಳನ್ನು ಹರಡುವುದರಲ್ಲಿ ಅತೀವ ಆಸಕ್ತರಾಗಿದ್ದಾರೆ ಮತ್ತು ಲಸಿಕೆ ತೆಗೆದುಕೊಳ್ಳಲು ಹಿಂಜರಿಕೆಗೆ ಇಂಬು ನೀಡುತ್ತಿದ್ದಾರೆ ಹಾಗೂ ದೇಶದ ಜನರ ಜೀವಗಳ ಜೊತೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಆಡಳಿತದ ರಾಜ್ಯವೊಂದರ ಹಾಲಿ ಮುಖ್ಯಮಂತ್ರಿ ಸ್ವದೇಶಿ ನಿರ್ಮಿತ ಲಸಿಕೆಯ ವಿರುದ್ಧ ಜನರನ್ನು ನೇರವಾಗಿ ಪ್ರಚೋದಿಸುತ್ತಿದ್ದಾರೆ ಎಂದು ಯಾರನ್ನೂ ಹೆಸರಿಸದೆ ಹರ್ಷವರ್ಧನ್ ಆಪಾದಿಸಿದರು.
  
ನಿಮ್ಮ ಕೆಲವು ನಾಯಕರ ಹೊಣೆಗೇಡಿ ಸಾರ್ವಜನಿಕ ಹೇಳಿಕೆಗಳಿಂದಾಗಿ ಕೆಲವು ಕಾಂಗ್ರಸ್ ಆಡಳಿತದ ರಾಜ್ಯಗಳಲ್ಲಿ ಹಿರಿಯ ನಾಗರಿಕರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೂ ಲಸಿಕೆ ನೀಡಿಕೆ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ. ಇವೇ ರಾಜ್ಯಗಳು ಕೋವಿಡ್-2ನೇ ಅಲೆಯಲ್ಲಿ ದೊಡ್ಡ ಪಾಲನ್ನು ಹೊಂದಿವೆ. ಈ ರಾಜ್ಯಗಳಲ್ಲಿ ಪಾಸಿಟಿವಿಟಿ ದರ ತೀರ ಹೆಚ್ಚಿದ್ದು,‌ ನಿಮ್ಮ ಸಲಹೆ ಮತ್ತು ವಿವೇಚನೆಯ ಲಾಭವನ್ನು ಅವರೂ ಪಡೆದುಕೊಳ್ಳಲಿ ಎಂದು ಹರ್ಷವರ್ಧನ್ ಅವರು ಮನಮೋಹನ ಸಿಂಗ್ ಅವರನ್ನು ಉದ್ದೇಶಿಸಿ ಹೇಳಿದರು.

ಇದೇ ವೇಳೆ ತುರ್ತು ಪರವಾನಿಗೆಯ ಮೂಲಕ ಹೆಚ್ಚಿನ ಲಸಿಕೆ ತಯಾರಕರಿಗೆ ಅವಕಾಶ ನೀಡುವಂತೆ ಮತ್ತು ಒಟ್ಟು ಸಂಖ್ಯೆಯ ಬದಲು ಜನಸಂಖ್ಯೆಯ ಶೇಕಡವಾರು ಪ್ರಮಾಣಕ್ಕೆ ಲಸಿಕೆ ನೀಡಿಕೆಯ ಬಗ್ಗೆ ಗಮನ ಹರಿಸುವಂತೆ ಸಲಹೆಗಳಿಗಾಗಿ ಮನಮೋಹನ್‌ ಸಿಂಗ್ ವಿರುದ್ಧವೂ ಹರ್ಷವರ್ಧನ ದಾಳಿ ನಡೆಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News