ಕೋವಿಡ್ ಲಸಿಕೆ ಉತ್ಪಾದನೆ ಹೆಚ್ಚಿಸಲು ಭಾರತ ಬಯೊಟೆಕ್, ಸಿರಮ್ ಗೆ ಕೇಂದ್ರದಿಂದ 4,500 ಕೋ.ರೂ.ಸಾಲ ಮಂಜೂರು

Update: 2021-04-19 17:56 GMT

ಹೊಸದಿಲ್ಲಿ,ಎ.19: ಕೋವಿಡ್-19 ಲಸಿಕೆಗಳನ್ನು ತಯಾರಿಸುತ್ತಿರುವ ಹೈದರಾಬಾದಿನ ಭಾರತ ಬಯೊಟೆಕ್ ಗೆ 1,500 ಕೋ.ರೂ.ಮತ್ತು ಪುಣೆಯ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ 3,000 ಕೋ.ರೂ.ಗಳ ಪೂರೈಕೆ ಸಾಲವನ್ನು ಮಂಜೂರು ಮಾಡಲು ಕೇಂದ್ರ ವಿತ್ತ ಸಚಿವಾಲಯವು ಸೋಮವಾರ ಒಪ್ಪಿಗೆಯನ್ನು ನೀಡಿದೆ. ಕೋವಿಡ್-19 ಉಸ್ತುವಾರಿಯನ್ನು ಹೊಂದಿರುವ ನೋಡಲ್ ಸಚಿವರಿಗೆ ಈ ಸಾಲದ ಮೊತ್ತವನ್ನು ಮಂಜೂರು ಮಾಡಲಾಗುವುದು ಮತ್ತು ಅವರು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಉಭಯ ಕಂಪನಿಗಳಿಗೆ ಈ ಮೊತ್ತವನ್ನು ವರ್ಗಾಯಿಸುತ್ತಾರೆ.

ಶೀಘ್ರವೇ ಸಾಲದ ಮೊತ್ತವನ್ನು ಬಿಡುಗಡೆಗೊಳಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 100 ಮಿಲಿಯನ್ ಡೋಸ್ಗೂ ಮೀರಿ ಹೆಚ್ಚಿಸಲು 3,000 ಕೋ.ರೂ.ಗಳನ್ನು ಮಂಜೂರು ಮಾಡುವಂತೆ ಸಿರಮ್ನ ಸಿಇಒ ಆದಾರ್ ಪೂನಾವಾಲಾ ಅವರು ಇತ್ತೀಚಿಗೆ ಸರಕಾರವನ್ನು ಕೋರಿಕೊಂಡಿದ್ದರು.

ತನ್ಮಧ್ಯೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೋವಿಡ್-19 ನಿರ್ವಹಣೆ ಕುರಿತಂತೆ ಭಾರತೀಯ ಕೈಗಾರಿಕಾ ರಂಗದ ಕಳವಳಗಳ ಬಗ್ಗೆ ವಿವಿಧ ಕೈಗಾರಿಕಾ ಚೇಂಬರ್ಗಳೊಂದಿಗೆ ಚರ್ಚಿಸಿದ್ದೇನೆ. ಸಾಂಕ್ರಾಮಿಕದ ನಡುವೆ ಜೀವಗಳನ್ನು ಮತ್ತು ಜೀವನೋಪಾಯಗಳನ್ನು ರಕ್ಷಿಸುವ ಕಾರ್ಯವನ್ನು ಕೇಂದ್ರವು ರಾಜ್ಯ ಸರಕಾರಗಳೊಂದಿಗೆ ಮುಂದುವರಿಸಲಿದೆ ಎಂದು ಸೋಮವಾರ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News