ಲಾಕ್‌ಡೌನ್: ಹೈಕೋರ್ಟ್ ಆದೇಶ ಪಾಲನೆಗೆ ನಿರಾಕರಿಸಿದ ಆದಿತ್ಯನಾಥ್ ಸರಕಾರ

Update: 2021-04-20 04:20 GMT

ಲಕ್ನೋ, ಎ.20: ಉತ್ತರ ಪ್ರದೇಶದ ಲಕ್ನೋ, ವಾರಣಾಸಿ, ಪ್ರಯಾಗ್‌ರಾಜ್, ಕಾನ್ಪುರ ಮತ್ತು ಗೋರಖ್‌ಪುರದಲ್ಲಿ ಕೋವಿಡ್-19 ಸರಣಿಯನ್ನು ತುಂಡರಿಸುವ ಸಲುವಾಗಿ ಲಾಕ್‌ಡೌನ್ ವಿಧಿಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶದ ಜಾರಿಗೆ ಉತ್ತರ ಪ್ರದೇಶ ಸರಕಾರ ನಿರಾಕರಿಸಿದೆ. ಈ ಐದು ನಗರಗಳಲ್ಲಿ ಖಾಸಗಿ ಮತ್ತು ಸರಕಾರಿ ಸಂಘಸಂಸ್ಥೆಗಳನ್ನು ಮುಚ್ಚುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಜನರ ಜೀವನಾಧಾರವನ್ನು ರಕ್ಷಿಸುವ ದೃಷ್ಟಿಯಿಂದ ಲಾಕ್‌ಡೌನ್ ಹೇರಿಕೆ ಅಸಾಧ್ಯ ಎಂದು ಸರಕಾರ ಹೇಳಿದೆ.

ನ್ಯಾಯಾಲಯದ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಉತ್ತರ ಪ್ರದೇಶ ಸರ್ಕಾರ ಹೇಳಿಕೆ ನೀಡಿ, "ಸದ್ಯಕ್ಕೆ ಈ ನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸುವುದಿಲ್ಲ. ಜನ ಸ್ವಯಂಪ್ರೇರಿತರಾಗಿ ಸಂಘ ಸಂಸ್ಥೆಗಳನ್ನು ಮುಚ್ಚಲಿದ್ದಾರೆ" ಎಂದು ಸ್ಪಷ್ಟಪಡಿಸಿದೆ.

"ರಾಜ್ಯದಲ್ಲಿ ಕೊರೋನ ಪ್ರಕರಣಗಳು ಹೆಚ್ಚಿವೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಲಾಗಿದೆ. ವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂದು ಹೇಳಲಾಗಿದೆ. ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದು, ಭವಿಷ್ಯದಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ" ಎಂದು ಸರ್ಕಾರಿ ವಕ್ತಾರರು ಹೇಳಿದ್ದಾರೆ.

"ಜನಪ್ರಿಯ ಸರ್ಕಾರ ತನ್ನ ರಾಜಕೀಯ ಒತ್ತಡಗಳ ಕಾರಣದಿಂದ ಸಾರ್ವಜನಿಕ ಚಲನೆಯನ್ನು ನಿರ್ಬಂಧಿಸದಿದ್ದರೆ, ನಾವು ಮೂಕಪ್ರೇಕ್ಷಕರಾಗಿ ಕುಳಿತುಕೊಳ್ಳುವಂತಿಲ್ಲ. ಕೆಲವರ ನಿರ್ಲಕ್ಷ್ಯದಿಂದ ಹರಡುತ್ತಿರುವ ಸಾಂಕ್ರಾಮಿಕದಿಂದ ಅಮಾಯಕ ಜನರನ್ನು ರಕ್ಷಿಸುವ ನಮ್ಮ ಸಂವಿಧಾನಾತ್ಮಕ ಕರ್ತವ್ಯದಿಂದ ನಾವು ನುಣುಚಿಕೊಳ್ಳುವಂತಿಲ್ಲ" ಎಂದು ನ್ಯಾಯಾಲಯ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News