ಗುಜರಾತ್‍ನ ಅಹ್ಮದಾಬಾದ್‍ನ ರುದ್ರಭೂಮಿ ದಾಖಲೆಗಳಲ್ಲಿ ಕೋವಿಡ್ ಸಾವುಗಳು 'ಅನಾರೋಗ್ಯ'ದಿಂದ ಸಾವು ಎಂದು ಉಲ್ಲೇಖ

Update: 2021-04-20 08:17 GMT
Photo: Theprint

ಅಹ್ಮದಾಬಾದ್: ಗುಜರಾತ್‍ನ ಅಹ್ಮದಾಬಾದ್‍ನಲ್ಲಿ ಕೋವಿಡ್ ರೋಗಿಗಳ ಅಂತ್ಯಕ್ರಿಯೆಗಳ ಸಂಖ್ಯೆಗಿಂತಲೂ 'ಅನಾರೋಗ್ಯ'ದಿಂದ ಸಾವಿಗೀಡಾದ ರೋಗಿಗಳ ಅಂತ್ಯಕ್ರಿಯೆಗಳು ಹೆಚ್ಚು ನಡೆದಿವೆ ಎಂದು  ತಿಳಿದು ಬಂದಿದೆ.

ಕೋವಿಡ್ ರೋಗಿಗಳ ಅಂತ್ಯಕ್ರಿಯೆ ನಡೆದಿದ್ದರೂ ಅಧಿಕೃತ ದಾಖಲೆಗಳಲ್ಲಿ 'ಅನಾರೋಗ್ಯ'ದಿಂದ ಸಾವು ಎಂದು ಬರೆಯಲಾಗುತ್ತಿದೆ ಎನ್ನಲಾಗಿದೆ.

ಈ ಕುರಿತು ಎಲ್ಲಿಸ್‍ಬ್ರಿಡ್ಜ್ ರುದ್ರಭೂಮಿಯ ಕಾರ್ಮಿಕರೊಬ್ಬರು ಪ್ರತಿಕ್ರಿಯಿಸಿ ಎಲ್ಲಾ ಕೋವಿಡ್ ಸಾವುಗಳನ್ನು ಅನಾರೋಗ್ಯದಿಂದ ಸಾವು ಎಂದು  ನಮೂದಿಸಬೇಕೆಂದು ತಮಗೆ ಸೂಚನೆ ನೀಡಲಾಗಿದೆ ಎಂದರಲ್ಲದೆ  "ನಿಮಗೆ ಏಕೆಂದು ತಿಳಿದಿದೆ ಏಕೆಂದು ನನ್ನಲ್ಲಿ ಕೇಳಬೇಡಿ" ಎಂದು ಭೇಟಿಯಾದ ಪತ್ರಕರ್ತರೊಬ್ಬರಿಗೆ ಹೇಳಿದ್ದಾರೆ.

ಈ ಕುರಿತು ತಮ್ಮ ಹೆಸರು ಹೇಳಲಿಚ್ಛಿಸದ ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಅಧಿಕಾರಿಯೊಬ್ಬರು  ಪ್ರತಿಕ್ರಿಯಿಸಿ "ಮೂರನೇ ಮತ್ತು ನಾಲ್ಕನೇ ದರ್ಜೆ ಕೆಲಸಗಾರರು ಶಿಕ್ಷಿತರಲ್ಲದೇ ಇರುವುದರಿಂದ ಹಾಗೂ  ಅವರಿಗೆ ಹೆಚ್ಚು ತಿಳಿಯದೇ ಇರುವುದರಿಂದ  ಸಾವಿನ ಕಾರಣ 'ಅನಾರೋಗ್ಯ' ಎಂದು ಬರೆಯಲು ಹೇಳಲಾಗಿದೆ,''ಹೇಳಿಕೊಂಡರು.

ನಗರದ ಕನಿಷ್ಠ ಆರು ರುದ್ರಭೂಮಿಗಳಲ್ಲೂ ಕೋವಿಡ್ ಸಾವುಗಳನ್ನು 'ಅನಾರೋಗ್ಯ'ದಿಂದ ಸಾವು ಎಂದು ನಮೂದಿಸಲಾಗುತ್ತಿದೆ.  ಆರೋಗ್ಯ ಇಲಾಖೆಯ ಉಪ ಆಯುಕ್ತ ಮೆಹುಲ್ ಆಚಾರ್ಯ ಈ ರೀತಿ ನಮೂದಿಸುವಂತೆ  ಸೂಚನೆ ನೀಡಿದ್ದಾರೆಂದು ಕಾರ್ಮಿಕರು ಹೇಳುತ್ತಿದ್ದಾರೆ. ಆದರೆ ಈ ಕುರಿತು ಆಚಾರ್ಯ ಅವರು ಪ್ರತಿಕ್ರಿಯೆಗೆ ಲಭ್ಯರಿಲ್ಲ ಎಂದು theprint.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News