ಶವಗಳನ್ನು ಸಾಗಿಸುತ್ತಿದ್ದ ವಾಹನಗಳ ಮುಂದೆ ಬಿಜೆಪಿ ಸಂಸದನ ಫೋಟೊಶೂಟ್!

Update: 2021-04-20 15:12 GMT
(Twitter/Alok Sharma)

ಹೊಸದಿಲ್ಲಿ: ಬಿಜೆಪಿ ಸಂಸದ ಹಾಗೂ  ಭೋಪಾಲ್ ಮಾಜಿ ಮೇಯರ್ ಅಲೋಕ್ ಶರ್ಮಾ ಅವರು ಕೋವಿಡ್ -19 ರಿಂದ ಮೃತಪಟ್ಟವರ ಶವಗಳನ್ನು ಸಾಗಿಸುತ್ತಿದ್ದ ಆರು ಮಿನಿ ಟ್ರಕ್‌ಗಳ ಮುಂದೆ ಫೋಟೊಕ್ಕೆ ಪೋಸ್ ನೀಡುವ ಮೂಲಕ  ವಿವಾದಕ್ಕೆ ಸಿಲುಕಿದ್ದಾರೆ. ಸಂಸದರ ಈ ವರ್ತನೆಯು ಕಾಂಗ್ರೆಸ್ ನ ತೀವ್ರ ಟೀಕೆಗೆ ಗುರಿಯಾಗಿದ್ದು,, ಇದೊಂದು "ನಾಚಿಕೆಯಿಲ್ಲದ ಫೋಟೋ ಶೂಟ್" ಎಂದು ಅದು ಟೀಕಿಸಿದೆ.

ಭೋಪಾಲ್‌ನ ವಿವಿಧ ಆಸ್ಪತ್ರೆಗಳಿಂದ ಶವಗಳನ್ನು ಸಾಗಿಸುತ್ತಿದ್ದ ಹೂಮಾಲೆಗಳಿಂದ ಆವೃತವಾದ “ಮುಕ್ತಿ ವಾಹನಗಳು’ ಎಂಬ ಫಲಕವನ್ನು ಹೊಂದಿದ್ದ ಮಿನಿಟ್ರಕ್ ಗಳ ಮುಂದೆ ಶರ್ಮಾ ಕಾಣಿಸಿಕೊಂಡಿರುವುದು ವೀಡಿಯೊದಲ್ಲಿದೆ.

ಆರು ಮಿನಿ ಟ್ರಕ್ ಗಳ ಪೈಕಿ ಒಂದನ್ನು ಫೋಟೋಶೂಟ್‌ಗಾಗಿ ನಿಲ್ಲಿಸಲಾಗಿತ್ತು ಎಂದು ವರದಿಯಾಗಿದೆ.

ಇದೊಂದು "ನಾಚಿಕೆಗೇಡಿನ ಕೆಲಸ" ಎಂದು ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಹೇಳಿದ್ದಾರೆ.

"ಈ ಮೊದಲು, ಬಿಜೆಪಿ ನಾಯಕರು ಇಂದೋರ್ ನಲ್ಲಿ ಆಮ್ಲಜನಕ ಟ್ಯಾಂಕರ್ ಅನ್ನು ಪೂಜಿಸಿದ್ದರು. ಆಮ್ಲಜನಕದ ವಿತರಣೆಗೆ ತೆರಳುತ್ತಿದ್ದ ಟ್ಯಾಂಕರ್ ಅನ್ನು ಮಾರ್ಗದಲ್ಲಿ ನಿಲ್ಲಿಸಿ ಈ ಕೆಲಸ ಮಾಡಿದ್ದರು. ಈಗ, ಇನ್ನೊಬ್ಬ ನಾಯಕ ಶವ ಸಾಗಿಸುವ ವಾಹನದ ಮುಂದೆ ಪೋಸ್ ನೀಡುತ್ತಿದ್ದಾರೆ. ಮತ್ತೊಂದು ಘಟನೆಯಲ್ಲಿ ಮಂತ್ರಿಯೊಬ್ಬರು ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟಿಸಿದರು. ಎಲ್ಲರೂ  ಫೋಟೋ ಶೂಟ್ ಗಾಗಿ ಇಂತಹ ಮಾರ್ಗ ಹುಡುಕುತ್ತಿದ್ದಾರೆ ”ಎಂದು ಸಲೂಜಾ ಟೀಕಿಸಿದರು.

ಆದಾಗ್ಯೂ, ಶರ್ಮಾ ಅವರು ಕಾಂಗ್ರೆಸ್ ಆರೋಪವನ್ನು ತಿರಸ್ಕರಿಸಿದರು. ಕಾಂಗ್ರೆಸ್ ಪಕ್ಷದವರು ವಿವಾದವನ್ನು ಹುಟ್ಟುಹಾಕಲು ಕೊಳಕು ರಾಜಕೀಯ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.

“ನಾನು ವಾಹನವನ್ನು ಆಸ್ಪತ್ರೆಯ ನಿರ್ವಹಣೆಗೆ ಒಪ್ಪಿಸಿದೆ. ನಂತರ, ಜೆಪಿ ಆಸ್ಪತ್ರೆ ಆ ವಾಹನವನ್ನು ಆ ವ್ಯಕ್ತಿಗೆ ನೀಡಿತು. ಮೃತದೇಹವನ್ನು ಹೊಂದಿರುವ ವಾಹನವು ಮಾಧ್ಯಮಗಳ ಸಮ್ಮುಖದಲ್ಲಿ ಹಾದುಹೋಯಿತು. ವ್ಯವಸ್ಥೆಗಳನ್ನು ಮಾಡಲು ನಾವು ನಿಜವಾದ ಪ್ರಯತ್ನಗಳನ್ನು ಮಾಡುತ್ತಿದ್ದೇವೆ’’ ಎಂದು ಶರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News