ಕೊವ್ಯಾಕ್ಸಿನ್ ಶೇ. 78 ಪರಿಣಾಮಕಾರಿ: ಭಾರತ್ ಬಯೋಟೆಕ್

Update: 2021-04-21 17:54 GMT

ಮುಂಬೈ, ಎ. 19: ಕೋವಿಡ್-19 ಸೋಂಕಿನ ಲಘು ಹಾಗೂ ತೀವ್ರ ಪ್ರಕರಣಗಳಲ್ಲಿ ತನ್ನ ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ಶೇ. 78 ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿದೆ ಎಂದು ಭಾರತ್ ಬಯೋಟೆಕ್ ಬುಧವಾರ ಹೇಳಿದೆ.

ಲಸಿಕೆಯ ಮೂರನೇ ಹಂತದ ವಿಶ್ಲೇಷಣೆಯಿಂದ ಪಡೆಯಲಾದ ಎರಡನೇ ಮಧ್ಯಂತರ ದತ್ತಾಂಶದ ಆಧಾರದಲ್ಲಿ ಹೈದರಾಬಾದ್ ಮೂಲದ ಸಂಸ್ಥೆ ಈ ಘೋಷಣೆ ಮಾಡಿದೆ. ಮಹಾರಾಷ್ಟ್ರದಲ್ಲಿ ಪತ್ತೆಯಾದ ದ್ವಿಗುಣಗೊಳ್ಳುವ ರೂಪಾಂತರಿತ ಪ್ರಬೇಧ ಸೇರಿದಂತೆ ಸಾರ್ಸ್-ಕೊವಿ-2ನ ಹಲವು ಪ್ರಬೇಧಗಳನ್ನು ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಘೋಷಿಸಿದ ದಿನವೇ ಭಾರತ ಬಯೋಟೆಕ್ ಈ ಘೋಷಣೆ ಮಾಡಿದೆ. ರಾಷ್ಟ್ರ ವ್ಯಾಪಿ ಲಸಿಕೆ ನೀಡಿಕೆಯ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಜನರಿಗೆ ಭಾರತ್ ಬಯೋಟೇಕ್‌ನ ಕೊವ್ಯಾಕ್ಸಿನ್ ಹಾಗೂ ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಅನ್ನು ನೀಡಲಾಗುತ್ತಿದೆ.

ಕೊವ್ಯಾಕ್ಸಿನ್ ಲಸಿಕೆ ತೆಗೆದುಕೊಂಡ ಬಳಿಕ ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವುದು ಶೇ. 100ರಷ್ಟು ಕಡಿಮೆಯಾಗುತ್ತದೆ ಎಂಬುದನ್ನು ಮೂರನೇ ಹಂತದ ಅಧ್ಯಯನದ ಎರಡನೇ ಮಧ್ಯಂತರ ದತ್ತಾಂಶ ಹೇಳಿದೆ ಎಂಬುದನ್ನು ಭಾರತ್ ಬಯೋಟೆಕ್ ಬುಧವಾರ ಉಲ್ಲೇಖಿಸಿದೆ. ‘‘ಸಾರ್ಸ್-ಕೊ ವಿ-2 ವಿರುದ್ಧದ ಪರಿಣಾಮಕಾರಿತ್ವ ಸಾಬೀತಾಗಿದೆ. ಮಾನವನ ಮೇಲಿನ ಕ್ಲಿನಿಕಲ್ ಟ್ರಯಲ್‌ಗಳು ಹಾಗೂ ತುರ್ತು ಸಂದರ್ಭದ ಬಳಕೆಯಲ್ಲಿ ಕೊವ್ಯಾಕ್ಸಿನ್ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ದಾಖಲಾಗಿದೆ. ಕೊವ್ಯಾಕ್ಸಿನ್ ಲಸಿಕೆ ಭಾರತದಲ್ಲಿ ಆರ್ ಆ್ಯಂಡ್ ಡಿ ಉತ್ಪಾದಿಸಿದ ಜಾಗತಿಕ ಆವಿಷ್ಕಾರ’’ ಎಂದು ಭಾರತ್ ಬಯೋಟೆಕ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೃಷ್ಣ ಎಲ್ಲ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News