ಸಿಪಿಎಂ ಮುಖ್ಯಸ್ಥ ಯೆಚೂರಿ ಪುತ್ರ ನಿಧನ: ಸಾಮಾಜಿಕ ತಾಣದಲ್ಲಿ ವಿಕೃತಿ ಮೆರೆದ ಬಿಜೆಪಿ ಮುಖಂಡ

Update: 2021-04-22 13:44 GMT

ಹೊಸದಿಲ್ಲಿ: ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿರವರ ಪುತ್ರ ಆಶಿಶ್‌ ಯೆಚೂರಿ ಕೋವಿಡ್‌ ಕಾರಣದಿಂದ ಇಂದು ಮೃತಪಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್‌ ಸೇರಿದಂತೆ ಹಲವರು ಈ ಕುರಿತು ಸಂತಾಪ ವ್ಯಕ್ತಪಡಿಸಿದ್ದರು. ಈ ನಡುವೆ ಬಿಜೆಪಿ ಮುಖಂಡನೋರ್ವ ತನ್ನ ಕೀಳು ಅಭಿರುಚಿಯ ಹೇಳಿಕೆಯನ್ನು ಸಾಮಾಜಿಕ ತಾಣದ ಮೂಲಕ ವ್ಯಕ್ತಪಡಿಸಿದ್ದು, ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬಿಹಾರದ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಿಥಿಲೇಶ್‌ ಕುಮಾರ್‌ ತಿವಾರಿ ಎಂಬಾತ ತನ್ನ ಸಾಮಾಜಿಕ ತಾಣ ಖಾತೆಯಲ್ಲಿ " ಚೀನಾ ಬೆಂಬಲಿಗ ಯೆಚೂರಿಯ ಪುತ್ರ ಚೀನಾ ನಿರ್ಮಿತ ಕೊರೋನ ವೈರಸ್‌ ಗೆ ಬಲಿಯಾಗಿದ್ದಾನೆ" ಎಂಬ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದು, ವಿವಾದ ಸೃಷ್ಟಿಯಾದ ಬಳಿಕ ತಮ್ಮ ಹೇಳಿಕೆಯನ್ನು ಅಳಿಸಿ ಹಾಕಿದ್ದಾರೆ ಎನ್ನಲಾಗಿದೆ.

ಸೀತಾರಾಂ ಪುತ್ರ ಆಶಿಶ್‌ ಯೆಚೂರಿ 35ರ ಹರೆಯದ ವೃತ್ತಿಪರ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ವಾರಗಳ ಹಿಂದೆ ಅವರಿಗೆ ಕೋವಿಡ್‌ ದೃಢಪಟ್ಟಿದ್ದು, ಇಂದು ಗುರುಗ್ರಾಮದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News