ಮೂರು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವವರೆಗೂ ಪ್ರತಿಭಟನಾ ತಾಣಗಳನ್ನು ತೆರವುಗೊಳಿಸುವುದಿಲ್ಲ: ರಾಕೇಶ್‌ ಟಿಕಾಯತ್

Update: 2021-04-22 15:36 GMT

‌ಹೊಸದಿಲ್ಲಿ,ಎ.22: ಮೂರು ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವವರೆಗೂ ರೈತರು ಪ್ರತಿಭಟನಾ ತಾಣಗಳಿಂದ ತಮ್ಮ ಮನೆಗಳಿಗೆ ಮರಳುವುದಿಲ್ಲ ಎಂದು ಗುರುವಾರ ಘೋಷಿಸಿದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು, ಈಗ ಪ್ರತಿಭಟನಾ ತಾಣಗಳೇ ರೈತರ ಮನೆಗಳಾಗಿವೆ ಎಂದು ಹೇಳಿದರು.

ರೈತರ ಗುಂಪು ಸೇರುವಿಕೆಯಿಂದ ಕೊರೋನವೈರಸ್ ಸಾಂಕ್ರಾಮಿಕ ಹೆಚ್ಚುತ್ತಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು,‘ರೈತರು ತಮ್ಮ ಮನೆಗಳಲ್ಲಿಯೇ ಇದ್ದಾರೆ. ಅವರು ಬೇರೆಲ್ಲಿಗೆ ಹೋಗಬೇಕೆಂದು ನಾವು ಹೇಳಬೇಕು? ಇಲ್ಲಿಂದ ಕೊರೋನವೈರಸ್ ಹರಡುತ್ತಿದೆಯೇ? ಕಳೆದ ಐದು ತಿಂಗಳುಗಳಿಂದಲೂ ನಾವಿಲ್ಲಿ ವಾಸವಾಗಿದ್ದೇವೆ. ಇದೀಗ ನಮ್ಮ ಮನೆಯಾಗಿದೆ ’ಎಂದರು.

‘ಹೆಚ್ಚಿನ ರೈತರು ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ,ಆದರೆ ಎರಡನೇ ಡೋಸ್ಗಾಗಿ ಪರದಾಡುತ್ತಿದ್ದಾರೆ. ಇಲ್ಲಿಯೇ ಲಸಿಕೆ ಶಿಬಿರವೊಂದನ್ನು ಸ್ಥಾಪಿಸುವಂತೆ ನಾವು ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದರು.
 
ಇಫ್ತಾರ್ನಲ್ಲಿ ರೈತರು ಕೋವಿಡ್-19 ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದರು. ವೈರಲ್ ವೀಡಿಯೊಕ್ಕೆ ಪ್ರತಿಕ್ರಿಯಿಸಿದ ಅವರು, ಜನರು ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿದ್ದರು. ಸರಕಾರವು 50 ಜನರಿಗೆ ಸೇರಲು ಅನುಮತಿ ನೀಡಿದೆಯಾದರೂ ಅಬ್ಬಬ್ಬಾ ಎಂದರೆ 35 ಜನರಷ್ಟೇ ಸೇರಿದ್ದರು. ಯಾರೂ ಪರಸ್ಪರರನ್ನು ಭೇಟಿ ಮಾಡಿರಲಿಲ್ಲ,ಹಸ್ತಲಾಘವ ನೀಡಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News