ಕೇಂದ್ರದ ಲಸಿಕೆ ನೀತಿ ಪ್ರಶ್ನಿಸಿದ ಸೋನಿಯಾ, ಮಮತಾ: ಏಕರೂಪ ಬೆಲೆ ನಿಗದಿಪಡಿಸುವಂತೆ ಆಗ್ರಹ

Update: 2021-04-22 18:02 GMT

ಹೊಸದಿಲ್ಲಿ, ಎ. 22: ನೂತನ ಕೋವಿಡ್ ಲಸಿಕೆ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ಲಸಿಕೆಗೆ ಭಾರತದಾದ್ಯಂತ ಏಕರೂಪದ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಹಾಗೂ ಕೇಂದ್ರ ಸರಕಾರದ ನೂತನ ಲಸಿಕೆ ನೀತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರದ ನೂತನ ಲಸಿಕೆ ನೀತಿ ನಿರಂಕುಶ ಹಾಗೂ ತಾರತಮ್ಯ ಹೊಂದಿದೆ. ಅಲ್ಲದೆ, ಈಗಾಗಲೇ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಮಾನ್ಯ ಜನರ ದುಃಖವನ್ನು ಈ ನೀತಿ ಇನ್ನಷ್ಟು ಉಲ್ಬಣಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷದ ಕಠಿಣ ಪಾಠಗಳು ಹಾಗೂ ನಮ್ಮ ಪ್ರಜೆಗಳಿಗೆ ಉಂಟಾದ ನೋವಿನ ಹೊರತಾಗಿಯೂ ಕೇಂದ್ರ ಸರಕಾರ ಅಸ್ತಿತ್ವದಲ್ಲಿರುವ ಸವಾಲುಗಳನ್ನು ಹೆಚ್ಚಿಸುವ ನಿರಂಕುಶ ನೀತಿ ಅನುಸರಿಸುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ ಹೇಳಿದ್ದಾರೆ. 

18ರಿಂದ 45 ವರ್ಷ ನಡುವಿನ ಎಲ್ಲಾ ಭಾರತೀಯರಿಗೆ ಉಚಿತ ಲಸಿಕೆ ಒದಗಿಸುವ ತನ್ನ ಜವಾಬ್ದಾರಿಯನ್ನು ಕೇಂದ್ರ ಸರಕಾರ ಕೈಬಿಟ್ಟಿದೆ ಎಂಬುದನ್ನು ಈ ನೂತನ ಲಸಿಕೆ ನೀತಿ ಸೂಚಿಸುತ್ತದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿದ ಕೋವಿಡ್-19 ಲಸಿಕೆಯ ವಿಭಿನ್ನ ಬೆಲೆ ವ್ಯವಸ್ಥೆಯನ್ನು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಕೇಂದ್ರ ಸರಕಾರ ಲಸಿಕೆಗೆ ಸಾರ್ವತ್ರಿಕ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿದ್ದಾರೆ.

ಈ ನಡುವೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಟ್ವೀಟ್ ಮಾಡಿ, ‘‘ಪ್ರಾಯ, ಜಾತಿ, ಜನಾಂಗ, ಸ್ಥಳ ಪರಿಗಣಿಸದೆ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಉಚಿತ ಲಸಿಕೆ ನೀಡಬೇಕು. ಕೇಂದ್ರ ಅಥವಾ ರಾಜ್ಯ ಎಂದು ಪರಿಗಣಿಸದೆ ಏಕರೂಪದ ಬೆಲೆ ನಿಗದಿಪಡಿಸಬೇಕು’’ ಎಂದು ಆಗ್ರಹಿಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘‘ಬಿಜೆಪಿ ಯಾವತ್ತೂ ಒಂದು ದೇಶ, ಒಂದು ಪಕ್ಷ, ಒಬ್ಬ ನಾಯಕ ಎಂದು ಕೂಗುತ್ತಿರುತ್ತದೆ. ಆದರೆ, ಜೀವ ಉಳಿಸುವ ಲಸಿಕೆಗೆ ಏಕರೂಪದ ಬೆಲೆ ನಿಗದಿಪಡಿಸಲು ಅದಕ್ಕೆ ಸಾಧ್ಯವಾಗಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News