×
Ad

ಸಿಎಂಗಳ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಕೇಜ್ರಿವಾಲ್: 'ಇದು ಸರಿಯಲ್ಲ' ಎಂದು ಪ್ರಧಾನಿ ಆಕ್ಷೇಪ

Update: 2021-04-23 19:59 IST

ಹೊಸದಿಲ್ಲಿ, ಎ.23: ದೇಶದಲ್ಲಿ ಕೊರೋನ ಸೋಂಕು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಶುಕ್ರವಾರ 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ರೊಂದಿಗೆ ನಡೆಸಿದ ಆಂತರಿಕ ಸಂವಾದ ಟಿವಿಯಲ್ಲಿ ನೇರ ಪ್ರಸಾರವಾದ ಬಗ್ಗೆ ಕೇಜ್ರೀವಾಲ್ ಅವರ ಕಚೇರಿ ವಿಷಾದ ಸೂಚಿಸಿದೆ. ಸಭೆಯಲ್ಲಿ ಮಾತನಾಡಿದ್ದ ಕೇಜ್ರೀವಾಲ್ ‘ರಾಜಧಾನಿ ದಿಲ್ಲಿಯಲ್ಲಿ ಆಮ್ಲಜನಕದ ಸಮಸ್ಯೆ ಬಿಗಡಾಯಿಸುತ್ತಿದೆ. 

ದಿಲ್ಲಿಯ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದ ಬಹುದೊಡ್ಡ ದುರಂತವೊಂದು ಸಂಭವಿಸಬಹುದು. ಆಮ್ಲಜನಕ ಪೂರೈಕೆದಾರರನ್ನು ದಿಲ್ಲಿ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ‘ಸರ್, ದಯಮಾಡಿ. ನಿಮ್ಮ ಮಾರ್ಗದರ್ಶನದ ಅಗತ್ಯವಿದೆ’ ಎಂದು ಹೇಳಿದ್ದರು. ಇದು ಕೆಲಹೊತ್ತು ಟಿವಿಯಲ್ಲಿ ನೇರಪ್ರಸಾರ ಆಗಿತ್ತು. ಆಂತರಿಕ ಸಭೆಯ ಸಂವಾದವನ್ನು ನೇರ ಪ್ರಸಾರ ಮಾಡಿರುವುದಕ್ಕೆ ಪ್ರಧಾನಿ ಮೋದಿ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಕೇಜ್ರೀವಾಲ್ ವಿಷಾದ ಸೂಚಿಸಿದ್ದಾರೆ. 

ಸಭೆಯ ವಿವರವನ್ನು ಪ್ರಸಾರ ಮಾಡಬಾರದು ಎಂಬ ಸೂಚನೆಯನ್ನು ಕೇಂದ್ರ ಸರಕಾರ ನೀಡದ ಕಾರಣ ಮುಖ್ಯಮಂತ್ರಿ ಕೇಜ್ರೀವಾಲ್ ಆಡಿದ ಮಾತುಗಳು ಟಿವಿಯಲ್ಲಿ ಪ್ರಸಾರವಾಗಿದೆ. ಈ ಸಭೆಯಲ್ಲಿ ಪ್ರಸ್ತಾವವಾದ ವಿಷಯಗಳು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯವಾದ್ದರಿಂದ ಪ್ರಸಾರವಾಗಿದೆ. ಆದರೂ ಅನಾನುಕೂಲವಾಗಿದ್ದರೆ ವಿಷಾದಿಸ್ತುತೇವೆ ಎಂದು ಕೇಜ್ರೀವಾಲ್ರ ಕಚೇರಿ ಹೇಳಿದೆ.

‘ಆಮ್ಲಜನಕದ ಕೊರತೆಯಿಂದ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಮುಂದಿನ ದಿನದಲ್ಲಿ ಬಹುದೊಡ್ಡ ದುರಂತ ಸಂಭವಿಸುವ ಆತಂಕವಿದ್ದು ನಮ್ಮನ್ನು ಎಂದಿಗೂ ಕ್ಷಮಿಸಲು ನಮಗೆ ಸಾಧ್ಯವಾಗದು. ದಿಲ್ಲಿಗೆ ಬರುವ ಆಮ್ಲಜನಕದ ಲಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಎಲ್ಲಾ ಮುಖ್ಯಮಂತ್ರಿಗಳಿಗೆ ಸೂಚಿಸಬೇಕೆಂದು ನಿಮಗೆ ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ. ದಿಲ್ಲಿಯಲ್ಲಿ ಆಮ್ಲಜನಕ ಉತ್ಪಾದಿಸುವ ಕಾರ್ಖಾನೆಗಳು ಇಲ್ಲವೆಂದ ಮಾತ್ರಕ್ಕೆ ದಿಲ್ಲಿಯವರಿಗೆ ಆಮ್ಲಜನಕ ಪೂರೈಕೆ ಇಲ್ಲವೇ? ದಿಲ್ಲಿಗೆ ಆಮ್ಲಜನಕ ಸಾಗಿಸುವ ಲಾರಿಯನ್ನು ಬೇರೆ ರಾಜ್ಯದಲ್ಲಿ ತಡೆಹಿಡಿದಾಗ ಕೇಂದ್ರ ಸರಕಾರದ ಯಾವ ಅಧಿಕಾರಿಯ ಜತೆ ನಾನು ಮಾತನಾಡಬೇಕು ದಯವಿಟ್ಟು ಸಲಹೆ ನೀಡಿ. ಮಾನ್ಯ ಪ್ರಧಾನಿಯವರೇ, ದಿಲ್ಲಿಗೆ ಬರಬೇಕಿದ್ದ ಆಮ್ಲಜನಕದ ಸಾಗಿಸುವ ಲಾರಿಗಳನ್ನು ತಡೆಹಿಡಿದಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಫೋನ್ ಕರೆ ಮಾಡಿ ಆಮ್ಲಜನಕವನ್ನು ದಿಲ್ಲಿಗೆ ತಲುಪಿಸಲು ದಯವಿಟ್ಟು ಕ್ರಮ ಕೈಗೊಳ್ಳಿ. ಆಮ್ಲಜನಕದ ಸಮಸ್ಯೆ ಪರಿಹರಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಿ. ದಿಲ್ಲಿಯಲ್ಲಿ ಆಮ್ಲಜನಕದ ಕೊರತೆ ಸಮಸ್ಯೆ ಪರಿಹರಿಸಲು ಪಶ್ಚಿಮ ಬಂಗಾಳ ಮತ್ತು ಒಡಿಶಾದಿಂದ ಆಮ್ಲಜನಕವನ್ನು ವಿಮಾನದ ಮೂಲಕ ಪರಿಹರಿಸಲು ಕ್ರಮ ಕೈಗೊಳ್ಳಬೇಕು ’ ಎಂದು ಕೇಜ್ರೀವಾಲ್ ಆಗ್ರಹಿಸಿದ್ದರು.

ಇದು ಆಂತರಿಕ ಸಂವಾದವಾಗಿದ್ದು ಟಿವಿಯಲ್ಲಿ ಪ್ರಸಾರದ ಉದ್ದೇಶದ ಕಾರ್ಯಕ್ರಮವಲ್ಲ. ಇದನ್ನು ಪ್ರಸಾರ ಮಾಡುವ ಮೂಲಕ ಕೇಜ್ರೀವಾಲ್ ಮತ್ತಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಸರಕಾರದ ಮೂಲಗಳು ಪ್ರತಿಕ್ರಿಯಿಸಿವೆ. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳೊಂದಿಗಿನ ಪ್ರಧಾನಿಯವರ ಖಾಸಗಿ ಸಂವಾದ ಟಿವಿಯಲ್ಲಿ ಪ್ರಸಾರವಾಗಿದೆ. ಪರಿಸ್ಥಿತಿ ಸುಧಾರಿಸಲು ತಾವು ಕೈಗೊಂಡ ಉಪಕ್ರಮಗಳ ಬಗ್ಗೆ ಎಲ್ಲಾ ಮುಖ್ಯಮಂತ್ರಿಗಳೂ ವಿವರಿಸಿದ್ದರೆ, ಕೇಜ್ರೀವಾಲ್ ಯಾವುದೇ ಪರಿಹಾರದ ಸಲಹೆ ನೀಡುವ ಬದಲು ಇದರಲ್ಲೂ ರಾಜಕೀಯ ಮಾಡಿ ಹೊಣೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದಾರೆ . ಈ ಹಿಂದೆ ಪ್ರಧಾನಿ ನಡೆಸಿದ್ದ ಸಭೆಯ ಸಂದರ್ಭ ಕೇಜ್ರೀವಾಲ್ ಆಕಳಿಸಿದ್ದರು ಹಾಗೂ ನಕ್ಕಿದ್ದರು ಎಂದು ಮೂಲಗಳು ಟೀಕಿಸಿವೆ. 

ಸಂಯಮ ಕಾಯ್ದುಕೊಳ್ಳಬೇಕು: ಮೋದಿ

ಆಂತರಿಕ ಸಭೆಯ ಚರ್ಚೆ ಟಿವಿಯಲ್ಲಿ ನೇರಪ್ರಸಾರವಾಗುತ್ತಿರುವ ಬಗ್ಗೆ ಪ್ರಧಾನಿ ಮೋದಿ ತೀವ್ರ ಆಕ್ಷೇಪ ಸೂಚಿಸಿದರು. ಏನು ನಡೆಯುತ್ತಿದೆ, ಕೆಲವು ಮುಖ್ಯಮಂತ್ರಿಗಳು ತಮ್ಮ ಮಾತುಗಳನ್ನು ನೇರ ಪ್ರಸಾರ ಮಾಡಿರುವುದು ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಇದು ಸರಿಯಲ್ಲ. ಸಂಯಮ ಕಾಯ್ದುಕೊಳ್ಳಬೇಕು’ ಎಂದು ಮೋದಿ ಸೂಚಿಸಿದರು. ಓಕೆ ಸರ್. ಮುಂದಿನ ದಿನದಲ್ಲಿ ನಾವು ಜಾಗರೂಕರಾಗಿರುತ್ತೇವೆ’ ಎಂದು ಕೇಜ್ರೀವಾಲ್ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News