ಕೃಷ್ಣನ್ ಕುಟ್ಟಿ ಪಣಿ ತುಡಙ್ಙಿ: ಇದು ದೆವ್ವಗಳಂತಹ ಮನುಷ್ಯರ ಕತೆ

Update: 2021-04-24 19:30 GMT

ದೆವ್ವದ ಚಿತ್ರಗಳು ಯಾವಾಗಲೂ ಸಣ್ಣ ಬಜೆಟ್‌ನಲ್ಲೇ ದೊಡ್ಡ ಸದ್ದು ಮಾಡುತ್ತಿರುತ್ತವೆ. ಒಂದುವೇಳೆ ಪ್ರೇಕ್ಷಕರ ನಡುವೆ ಸದ್ದು ಮಾಡದಿದ್ದರೂ, ಚಿತ್ರಮಂದಿರದಲ್ಲಿ ಹಾಹಾಕಾರ ಕೇಳಿಸುವುದಕ್ಕೆ ಕೊರತೆ ಇರುವುದಿಲ್ಲ. ಆದರೆ ‘ಕೃಷ್ಣನ್ ಕುಟ್ಟಿ ಪಣಿ ತುಡಙ್ಙಿ’ ಎನ್ನುವ ಈ ದೆವ್ವದ ಚಿತ್ರ ಒಟಿಟಿ ಫ್ಲಾಟ್‌ಫಾರ್ಮ್ ಮೂಲಕ ಬಿಡುಗಡೆಯಾಗಿರುವ ಕಾರಣ ಅಂತಹ ಅವಕಾಶಗಳೂ ಇಲ್ಲ. ಆದರೆ ಬೆಚ್ಚಿ ಬೀಳಿಸುವ ದೃಶ್ಯಗಳಿಗೆ ಕೊರತೆ ಇಲ್ಲ. ಚಿತ್ರದ ಶೀರ್ಷಿಕೆ ಮತ್ತು ಟ್ರೇಲರ್ ಮೂಲಕ ಕೃಷ್ಣನ್ ಕುಟ್ಟಿ ಎನ್ನುವ ಹೆಸರನ್ನು ಹೈಲೈಟ್ ಮಾಡಲಾಗಿದ್ದು ನೋಡಿದರೆ ಈ ಸಿನೆಮಾದ ಕತೆ ಆತನ ಸುತ್ತಲೇ ಇರಬಹುದೇನೋ ಅನಿಸಿರುತ್ತದೆ. ಆದರೆ ಮೊದಲು ಅಂತಹದ್ದೊಂದು ಶೀರ್ಷಿಕೆಯನ್ನೇ ಮರೆತು ಚಿತ್ರ ನೋಡುವುದು ಉತ್ತಮ. ಯಾಕೆಂದರೆ ಕತೆಗೂ ಶೀರ್ಷಿಕೆಗೂ ಯಾವ ಸಂಬಂಧವೂ ಇಲ್ಲ.

ಒಂದು ಕಾಡು. ಕಾಡಿನೊಳಗೆ ಒಂದು ಪುರಾತನ ಮನೆ. ಆ ಮನೆಯೆಂದರೆ ಪೂರ್ತಿ ಒಂದು ಸುತ್ತು ಹಾಕಲು ಅರ್ಧಗಂಟೆ ತೆಗೆದುಕೊಳ್ಳಬೇಕಾದಷ್ಟು ದೊಡ್ಡದು. ಆ ಮನೆಯ ಕೆಲಸದಾಕೆ ತನ್ನ ಮನೆಗೆ ಹೋದ ಮೇಲೆ ಅಲ್ಲಿ ಬಿಯಾಟ್ರಿಸ್ ಎನ್ನುವ ಯುವತಿ ಮತ್ತು ಮಂಚದ ಮೇಲೆ ನಡೆದಾಡಲಾಗದೆ ಬಿದ್ದುಕೊಂಡಿರುವ ಆಕೆಯ ತಾತ ಮಾತ್ರ ಇರುತ್ತಾರೆ. ತಾತನನ್ನು ನೋಡಿಕೊಳ್ಳಲು ಅಲ್ಲಿಗೆ ಶುಶ್ರೂಷಕನೋರ್ವನ ಆಗಮನವಾಗುತ್ತದೆ. ಆತನೇ ಚಿತ್ರದ ನಾಯಕ. ಆ ಹುಡುಗಿಯ ಮನೆಯವರೇ ತನ್ನನ್ನು ಕರೆಸಿದ್ದಾಗಿ ಹೇಳುವ ಆತ ಅದಕ್ಕೆ ಸಾಕ್ಷಿಯನ್ನು ಕೂಡ ನೀಡುತ್ತಾನೆ. ಸಂಜೆಯಾಗುತ್ತಿದ್ದಂತೆ ಅವರು ದೆವ್ವಗಳ ಬಗ್ಗೆ ಮಾತನಾಡುತ್ತಾರೆ. ಆತ ತಾನು ಕೇಳಿದ ಕೃಷ್ಣನ್ ಕುಟ್ಟಿಯ ಬಗ್ಗೆ ಸ್ವಲ್ಪಹೊತ್ತು ಮಾತನಾಡುತ್ತಾನೆ. ಆದರೆ ನಿಜವಾದ ಕತೆ ಅವರಿಬ್ಬರ ನಡುವೆಯೇ ನಡೆಯುತ್ತದೆ. ಆಕೆ ಮತ್ತು ತಾತನ ಸಂಬಂಧವೇನು? ಆ ತಾತ ಮಲಗಿದ್ದಲ್ಲಿಂದ ಒಮ್ಮೆಲೇ ನಾಪತ್ತೆಯಾಗುವುದು ಎಲ್ಲಿಗೆ? ಕೊನೆಗೂ ಆ ಮನೆಯಲ್ಲಿನ ಅಪಾಯಗಳಿಂದ ತಪ್ಪಿಸಿಕೊಳ್ಳಬೇಕು ಎಂದು ಪ್ರಯತ್ನಿಸುವ ನಾಯಕ ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಗಳಿಸುತ್ತಾನೆ ಎನ್ನುವುದನ್ನು ಪರದೆಯಲ್ಲೇ ನೋಡಿದರೆ ಉತ್ತಮ.

ಒಬ್ಬ ನಟಿಗೆ ಆಕೆಯ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶ ಸಿಗುವುದು ಆಕೆ ದೆವ್ವದ ಪಾತ್ರವನ್ನು ನಿಭಾಯಿಸುವಾಗ ಎನ್ನುವ ಮಾತಿದೆ. ಚಿತ್ರದಲ್ಲಿ ಬಿಯಾಟ್ರಿಸ್ ಎನ್ನುವ ಪಾತ್ರವನ್ನು ನಿಭಾಯಿಸಿರುವ ಸಾನಿಯಾ ಅಯ್ಯಪ್ಪನ್ ಇಲ್ಲಿ ದೆವ್ವವೇನೂ ಅಲ್ಲ. ಆದರೆ ದೆವ್ವಕ್ಕೂ ಮಿಗಿಲಾದ ಲಕ್ಷಣಗಳನ್ನು ಹೊಂದಿರುವ ಹುಡುಗಿ. ಆಕೆ ಹಾಗಾಗಲು ಕಾರಣವಾದ ಅಂಶಗಳನ್ನು ಕೂಡ ಸಿನೆಮಾ ಹೇಳುತ್ತದೆ. ಈ ಎಲ್ಲ ಕಾರಣಗಳಿಂದ ನಟಿ ಸಾನಿಯಾ ಅಯ್ಯಪ್ಪನ್ ನೆನಪಲ್ಲಿ ಉಳಿಯುವಂತಹ ಪಾತ್ರವಾಗಿ ಪ್ರೇಕ್ಷಕರ ಮನದಲ್ಲಿ ಜಾಗ ಪಡೆಯುತ್ತಾರೆ.

ಉಣ್ಣಿಕಣ್ಣನ್ ಎನ್ನುವ ಶುಶ್ರೂಷಕನಾಗಿ ನಟಿಸಿರುವ ವಿಷ್ಣು ಉಣ್ಣಿಕೃಷ್ಣನ್ ತಮ್ಮ ಹಿಂದಿನ ಚಿತ್ರಗಳಲ್ಲಿನ ಹಾಗೆ ಪಡ್ಡೆಹೈಕಳ ಪ್ರತಿನಿಧಿಯೆನ್ನುವಂತೆ ತೋರಿಸಿಕೊಂಡಿದ್ದಾರೆ. ನಾಯಕನೇ ಪಡ್ಡೆಯಾದರೆ ಇನ್ನು ಪರಮ ಪೋಲಿ ಪಾತ್ರಗಳ ಮೂಲಕವೇ ಗುರುತಿಸಿಕೊಳ್ಳುತ್ತಿರುವ ವಿಜಿಲೇಶ್ ಕೂಡ ಮತ್ತೊಂದು ಅಂತಹದ್ದೇ ಪಾತ್ರಕ್ಕೆ ಜೀವನೀಡಿದ್ದಾರೆ. ಆದರೆ ಇತ್ತೀಚೆಗಷ್ಟೇ ವಿಷ್ಣುವರ್ಧನ್ ಅವರ ಬಗ್ಗೆ ತಪ್ಪಾಗಿ ಮಾತನಾಡಿ ಕ್ಷಮೆಯಾಚಿಸಿ ಸುದ್ದಿಯಾದ ತೆಲುಗು ನಟ ವಿಜಯರಂಗ ರಾಜು, ಚಿತ್ರದಲ್ಲಿ ತಾತನಾಗಿ ಭಯಾನಕ ಅಭಿನಯ ನೀಡಿ ವಿಜಯ ಸಾಧಿಸಿದ್ದಾರೆ.

ಉಳಿದಂತೆ ಪಾತ್ರಗಳ ವಿಚಾರದಲ್ಲಿ ವಿಶೇಷತೆಗಳೇನೂ ಇಲ್ಲ. ಆದರೆ ಮೇಕಿಂಗ್ ಬಗ್ಗೆ ಮೆಚ್ಚಲೇಬೇಕು. ಕತೆ ಒಂದು ಹಂತದಲ್ಲಿ ಕುತೂಹಲ ಕಳೆದುಕೊಂಡಾಗಲೂ ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಸಂಕಲನ ಮಾಡಿರುವ ರೀತಿ ಪರದೆಯ ಮೇಲಿನ ಆಕರ್ಷಣೆಯನ್ನು ಉಳಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಹಾರರ್ ಸಿನೆಮಾ ಪ್ರಿಯರು ನೋಡಬಹುದಾದ ಸಿನೆಮಾ ಎಂದಷ್ಟೇ ಹೇಳಬಹುದು.

ತಾರಾಗಣ: ವಿಷ್ಣು ಉಣ್ಣಿಕೃಷ್ಣನ್, ಸಾನಿಯಾ ಅಯ್ಯಪ್ಪನ್
ನಿರ್ದೇಶನ: ಸೂರಜ್ ಟಾಮ್
ನಿರ್ಮಾಣ: ನೋಬಲ್ ಜೋಸ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News