×
Ad

ಇದು ನನ್ನ ಆಕ್ಸಿಜನ್ ಝಕಾತ್: ಆಮ್ಲಜನಕ ತಲುಪಿಸಲು ಲಕ್ಷಗಟ್ಟಲೆ ಖರ್ಚು ಮಾಡಿದ ಉದ್ಯಮಿ ಪ್ಯಾರೇ ಖಾನ್

Update: 2021-04-26 18:57 IST
Photo source: Twitter

ನಾಗ್ಪುರ: ನಾಗ್ಪುರ ರೈಲ್ವೆ ನಿಲ್ದಾಣದ ಹೊರಗೆ ಕಿತ್ತಳೆ ಮಾರುತ್ತಿದ್ದ ಪ್ಯಾರೇ ಖಾನ್ ಇವತ್ತು 400 ಕೋಟಿ ರೂ ಮೌಲ್ಯದ ಸರಕು ಸಾಗಾಟ ಕಂಪೆನಿಯ ಮಾಲಕ. ಆದರೆ ಈಗ ಅವರು ಸುದ್ದಿಯಲ್ಲಿರುವುದು ಅದಕ್ಕಾಗಿ ಅಲ್ಲ. ಕಳೆದ ಒಂದು ವಾರಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪ್ಯಾರೇ ಖಾನ್ 85 ಲಕ್ಷ ರೂಪಾಯಿ ಕೈಯಿಂದ ಖರ್ಚು ಮಾಡಿ  ನಾಗ್ಪುರ ಹಾಗು ಸುತ್ತಮುತ್ತಲ ಸರಕಾರಿ ಆಸ್ಪತ್ರೆಗಳಿಗೆ 400 ಮೆಟ್ರಿಕ್ ಟನ್ ಗೂ ಹೆಚ್ಚು ಆಮ್ಲಜನಕ ತಲುಪಿಸಿದ್ದಾರೆ. ಆ ಮೂಲಕ ನೂರಾರು ಜನರ ಪ್ರಾಣ ಉಳಿಸಿದ್ದಾರೆ. 

ಜಿಲ್ಲಾಡಳಿತ ಈ ಮೊತ್ತವನ್ನು ವಾಪಸ್ ನೀಡುವುದಾಗಿ ಹೇಳಿದರೂ ಈ ಮಾಜಿ ಆಟೋ ಡ್ರೈವರ್ ಹಾಲಿ ಟ್ರಾನ್ಸ್ ಪೋರ್ಟ್ ಕಂಪೆನಿ ಮಾಲಕ ನನಗೆ ದುಡ್ಡು ಬೇಡ ಎಂದು ಹೇಳಿದ್ದಾರೆ. ಇದು ಪವಿತ್ರ ರಮಝಾನ್ ತಿಂಗಳಲ್ಲಿ ನಾನು ನೀಡುವ ಆಕ್ಸಿಜನ್ ಝಕಾತ್ ( ರಮಝಾನ್ ತಿಂಗಳಲ್ಲಿ ಸಾಮರ್ಥ್ಯ ಇರುವ ಮುಸ್ಲಿಮರು ಕಡ್ಡಾಯವಾಗಿ ನೀಡಬೇಕಾದ ದಾನ ) ಎಂದು ಬಣ್ಣಿಸಿರುವ ಪ್ಯಾರೇ ಖಾನ್ ಇದರಿಂದ ನೂರಾರು ಸರ್ವಧರ್ಮೀಯರಿಗೆ ಪ್ರಯೋಜನವಾಗಲಿದೆ. ಇದು ನನ್ನ ಮಾನವೀಯ ಕರ್ತವ್ಯ ಎಂದು ಹೇಳಿದ್ದಾರೆ. 

ಅಗತ್ಯ ಬಿದ್ದರೆ ಜರ್ಮನಿಯ ಬ್ರಸೆಲ್ಸ್ ನಿಂದ ವಿಮಾನದ ಮೂಲಕವೂ ಆಕ್ಸಿಜನ್ ಟ್ಯಾಂಕರ್ ತರಿಸುವ ಬಗ್ಗೆ ಪ್ಯಾರೇ ಖಾನ್ ಯೋಜನೆ ಹಾಕಿಕೊಂಡಿದ್ದಾರೆ. 2000 ಕ್ಕೂ ಹೆಚ್ಚು ಟ್ರಕ್ ಗಳ ಮಾಲಕರಾಗಿರುವ ಖಾನ್ ರ ವ್ಯವಹಾರ ಭಾರತ ಮಾತ್ರವಲ್ಲದೆ ನೇಪಾಳ, ಭೂತಾನ್, ಬಾಂಗ್ಲಾ ದೇಶಗಳಲ್ಲೂ ಇದೆ. ಐಐಎಂ ಅಹ್ಮದಾಬಾದ್ ಅವರ ಯಶೋಗಾಥೆ ಕುರಿತು ಪಠ್ಯ ಇಟ್ಟಿದೆ. 

ನಾಗ್ಪುರದಲ್ಲಿ ಆಮ್ಲಜನಕದ ತೀವ್ರ ಅಗತ್ಯ ಬಿದ್ದಾಗ ಬೆಲೆ ಚೌಕಾಸಿ ಮಾಡದೆ ಬೆಂಗಳೂರು ಮತ್ತಿತರ ಕಡೆಗಳಿಂದ ದುಬಾರಿ ಬೆಲೆ ತೆತ್ತು ಖಾನ್ ಆಕ್ಸಿಜನ್ ಟ್ಯಾಂಕರ್ ತರಿಸಿದ್ದಾರೆ. ಈಗ ನಾಗ್ಪುರ ಸಂಸದ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೂ ಸಹಕಾರ ನೀಡುತ್ತಿದ್ದು ಜಿಲ್ಲಾಡಳಿತದ ಪರವಾಗಿ ಖಾನ್ ಅವರೇ ಆಕ್ಸಿಜನ್ ಸಾಗಾಟ, ಪೂರೈಕೆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ತನ್ನ ಸಮಾಜ ಸೇವೆಗೆ ಗಡ್ಕರಿ ಅವರು ಪ್ರೇರಣೆ ಎಂದು ಖಾನ್ ಹೇಳಿದ್ದಾರೆ. 
ಖಾನ್ ಅವರ ಅಶ್ಮಿ ರೋಡ್ ಕ್ಯಾರಿಯರ್ಸ್ ಪ್ರೈ ಲಿ ನಲ್ಲಿ 1200ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News