×
Ad

ದಿಲ್ಲಿಯಲ್ಲಿ ದಾಖಲೆ ಸಂಖ್ಯೆಯಲ್ಲಿ ಕೋವಿಡ್ ಸಾವುಗಳು: ಅಂತ್ಯಸಂಸ್ಕಾರಕ್ಕೆ ಎದುರಾಗುತ್ತಿದೆ ಜಾಗದ ಕೊರತೆ

Update: 2021-04-26 20:00 IST

ಹೊಸದಿಲ್ಲಿ,ಎ.26: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿದಿನವೂ 350ಕ್ಕೂ ಅಧಿಕ ಕೊರೋನವೈರಸ್ ಸಾವುಗಳು ಸಂಭವಿಸುತ್ತಿದ್ದು,ಮೃತರ ಅಂತ್ಯಸಂಸ್ಕಾರಕ್ಕೆ ಜಾಗದ ಕೊರತೆಯುಂಟಾಗುತ್ತಿದೆ. ಸಮಸ್ಯೆ ಎಷ್ಟೊಂದು ತೀವ್ರವಾಗಿದೆ ಎಂದರೆ ಖಾಲಿ ನಿವೇಶನಗಳನ್ನು ತಾತ್ಕಾಲಿಕ ಸ್ಮಶಾನಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

ಸೋಮವಾರ ದಿಲ್ಲಿಯಲ್ಲಿ 350 ಕೋವಿಡ್ ಸಾವುಗಳು ದಾಖಲಾಗಿದ್ದು,ರವಿವಾರ 357 ಮತ್ತು ಶನಿವಾರ 348 ಸಾವುಗಳು ವರದಿಯಾಗಿದ್ದವು. ಕಳೆದ ವಾರದಲ್ಲಿ ಸಾಂಕ್ರಾಮಿಕದಿಂದಾಗಿ ದಿನವೊಂದಕ್ಕೆ ಸರಾಸರಿ 304 ಸಾವುಗಳು ಸಂಭವಿಸಿದ್ದವು.

 ಸರಾಯ್ ಕಾಲೆ ಖಾನ್ ಚಿತಾಗಾರದಲ್ಲಿ ಪ್ರತಿದಿನ ಸುಮಾರು 60ರಿಂದ 70 ಶವಗಳ ಅಂತ್ಯಸಂಸ್ಕಾರಗಳನ್ನು ನಡೆಸಲಾಗುತ್ತಿದೆ. ಆದರೆ ಈ ಚಿತಾಗಾರವು ಕೇವಲ 22 ಅಂತ್ಯಸಂಸ್ಕಾರಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಸಾವುಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಮೀಪದ ಬಯಲಿನಲ್ಲಿ ಕನಿಷ್ಠ ನೂರು ಅಂತ್ಯಸಂಸ್ಕಾರ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ.

ನೂತನ ವೇದಿಕೆಗಳ ನಿರ್ಮಾಣವನ್ನು ಶೀಘ್ರ ಪೂರ್ಣಗೊಳಿಸುವಂತೆ ಭಾರೀ ಒತ್ತಡವಿದೆ. ಸುಮಾರು 20 ವೇದಿಕೆಗಳು ಇಂದು ರಾತ್ರಿಯೊಳಗೆ ಸಿದ್ಧವಾಗಲಿವೆ. ಉಳಿದ 80 ವೇದಿಕೆಗಳು ಇನ್ನು ಕೆಲವು ದಿನಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ನಿರ್ಮಾಣ ಗುತ್ತಿಗೆಯನ್ನು ವಹಿಸಿಕೊಂಡಿರುವ ಪಶುಪತಿ ಮಂಡಲ್ ತಿಳಿಸಿದರು.

ಚಿತಾಗಾರದ ಸಿಬ್ಬಂದಿಗಳು ಕೆಲಸದ ಭಾರದಿಂದ ಎಷ್ಟೊಂದು ಹೈರಾಣಾಗಿದ್ದಾರೆ ಎಂದರೆ ಚಿತೆಗೆ ಕಟ್ಟಿಗೆಯನ್ನು ಹೊತ್ತು ತರುವುದು ಮತ್ತಿತರ ಕೆಲಸಗಳನ್ನು ಮಾಡುವ ಮೂಲಕ ಮೃತರ ಬಂಧುಗಳು ಅವರಿಗೆ ನೆರವಾಗುತ್ತಿದ್ದಾರೆ.

ದಿಲ್ಲಿಯ ಮೂರು ಮಹಾನಗರ ಪಾಲಿಕೆಗಳು ನಡೆಸುತ್ತಿರುವ ದಿಲ್ಲಿಯ ಇತರ 25 ಚಿತಾಗಾರಗಳು ಮತ್ತು ದಫನ ಭೂಮಿಗಳಲ್ಲಿಯೂ ಪರಿಸ್ಥಿತಿಯು ಭಿನ್ನವಾಗಿಲ್ಲ.

ಕೋವಿಡ್ ಎರಡನೇ ಅಲೆಯಲ್ಲಿ ಸಾವುಗಳ ಸಂಖ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಹಲವಾರು ನಗರಗಳು ಅಂತ್ಯಸಂಸ್ಕಾರಕ್ಕೆ ಜಾಗದ ಕೊರತೆಯನ್ನು ಎದುರಿಸುತ್ತಿವೆ. ಇದು ಕೊರೋನ ಭೀಕರತೆಯ ಒಂದು ಮಗ್ಗಲು ಮಾತ್ರ. ಆಮ್ಲಜನಕ,ಔಷಧಿಗಳು,ಲಸಿಕೆಗಳು ಮತ್ತು ಆಸ್ಪತ್ರೆ ಹಾಸಿಗೆಗಳಿಗಾಗಿಯೂ ದೇಶಾದ್ಯಂತ ಹಾಹಾಕಾರವೆದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News