ಶಸಸ್ತ್ರ ಪಡೆಯಲ್ಲಿ ಲಭ್ಯವಿರುವ ಆಮ್ಲಜನಕ ಕೋವಿಡ್ ಆಸ್ಪತ್ರೆಗೆ ಬಿಡುಗಡೆ: ಸೇನಾ ವರಿಷ್ಠ ಬಿಪಿನ್ ರಾವತ್

Update: 2021-04-26 18:09 GMT

ಹೊಸದಿಲ್ಲಿ, ಎ. 26: ದೇಶಾದ್ಯಂತ ತೀವ್ರವಾಗಿ ಏರುತ್ತಿರುವ ಕೊರೋನ ಸೋಂಕಿನ ವಿರುದ್ಧ ಹೋರಾಡಲು ಶಸಸ್ತ್ರ ಪಡೆ ಕೈಗೊಂಡ ಸಿದ್ಧತೆ ಬಗ್ಗೆ ಮೂರು ಪಡೆಗಳ ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ.

ಶಸಸ್ತ್ರ ಪಡೆಯಿಂದ ಕಳೆದ ಎರಡು ವರ್ಷಗಳಲ್ಲಿ ನಿವೃತ್ತಿಯಾದ ಅಥವಾ ಅವಧಿ ಪೂರ್ವ ನಿವೃತ್ತಿಯಾದ ವೈದ್ಯಕೀಯ ಅಧಿಕಾರಿಗಳನ್ನು ಹಿಂದೆ ಕರೆಸಲಾಗಿದೆ ಹಾಗೂ ಅವರ ಪ್ರಸಕ್ತ ನಿವಾಸದ ಸಮೀಪ ಇರುವ ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವಂತೆ ವಿನಂತಿಸಲಾಗಿದೆ ಎಂದು ಜನರಲ್ ರಾವತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಹೇಳಿಕೆ ತಿಳಿಸಿದೆ.

ವೈದ್ಯಕೀಯ ತುರ್ತು ಸಹಾಯವಾಣಿಯ ಮೂಲಕ ಸಮಾಲೋಚನೆ ಸೇವೆ ನೀಡುವಂತೆ ಅದಕ್ಕಿಂತ ಮುನ್ನ ನಿವೃತ್ತಿಯಾದ ಇತರ ವೈದ್ಯಕೀಯ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಕೂಡ ಹೇಳಿಕೆ ತಿಳಿಸಿದೆ. ಇದೇ ರೀತಿ ಕೋವಿಡ್ ಸೌಲಭ್ಯಗಳಲ್ಲಿ ವೈದ್ಯರಿಗೆ ಬೆಂಬಲ ನೀಡಲು ನರ್ಸ್‌ಗಳನ್ನು ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಜನರಲ್ ರಾವತ್ ಅವರು ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.

ಶಸಸ್ತ್ರ ಪಡೆಯ ವೈದ್ಯರು ಹಾಗೂ ನರ್ಸ್‌ಗಳ ಜೊತೆಗೆ ಕಮಾಂಡ್ ಕೇಂದ್ರ ಕಚೇರಿ, ಕಾರ್ಪ್ಸ್ ಕೇಂದ್ರ ಕಚೇರಿ, ವಿಭಾಗೀಯ ಕೇಂದ್ರ ಕಚೇರಿ, ನೌಕಾ ಹಾಗೂ ವಾಯು ಪಡೆಯ ತತ್ಸಮಾನ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವೈದ್ಯಕೀಯ ಅಧಿಕಾರಿಗಳನ್ನು ಕೋವಿಡ್ ಆಸ್ಪತ್ರೆಗಳಿಗೆ ಮರು ನಿಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಶಸಸ್ತ್ರ ಪಡೆಯಲ್ಲಿ ಇರುವ ಆಮ್ಲಜನಕದ ಸಿಲಿಂಡರ್‌ಗಳನ್ನು ಅಗತ್ಯ ಇರುವ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಕೂಡ ರಾವತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News