ಸಿಎಂ ವಿಪತ್ತು ಪರಿಹಾರ ನಿಧಿಗೆ 2 ಲಕ್ಷ ರೂ. ನೀಡಿದ ಬೀಡಿ ಕಾರ್ಮಿಕ

Update: 2021-04-26 18:15 GMT

ತಿರುವನಂತಪುರ, ಎ. 26: ವ್ಯಕ್ತಿಯೋರ್ವರು ಬೀಡಿ ಕಟ್ಟಿ ಸಂಪಾದಿಸಿದ 2 ಲಕ್ಷ ರೂಪಾಯಿಯನ್ನು ಕೊರೋನ ಲಸಿಕೆ ಖರೀದಿಸಲು ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿ (ಸಿಎಂಡಿಆರ್‌ಎಫ್)ಗೆ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಆ ವ್ಯಕ್ತಿ ತನ್ನ ಖಾತೆಯಿಂದ 2 ಲಕ್ಷ ರೂಪಾಯಿಯನ್ನು ಸಿಎಂಡಿಆರ್‌ಎಫ್ ಖಾತೆಗೆ ವರ್ಗಾಯಿಸುವಂತೆ ಕೋರಿದಾಗ ನಮಗೆ ಆಶ್ಚರ್ಯ ಉಂಟಾಯಿತು.

ಯಾಕೆಂದರೆ, ಹಣ ವರ್ಗಾವಣೆ ಬಳಿಕ ಅವರ ಖಾತೆಯಲ್ಲಿ ಕೇವಲ 850 ರೂಪಾಯಿ ಬಾಕಿ ಉಳಿದಿತ್ತು ಎಂದು ಬ್ಯಾಂಕ್‌ನ ಸಿಬ್ಬಂದಿ ಹೇಳಿದ್ದಾರೆ. ಭವಿಷ್ಯದಲ್ಲಿ ಏನಾದರೂ ಹಣದ ಸಮಸ್ಯೆ ಎದುರಾದರೆ ಏನು ಮಾಡುತ್ತೀರಿ? ಎಂದು ಅಧಿಕಾರಿಯೋರ್ವರು ಆ ವ್ಯಕ್ತಿಯಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ಆ ವ್ಯಕ್ತಿ ನೀಡಿದ ಉತ್ತರ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿ ಮಾಡಿದೆ. ಆ ವ್ಯಕ್ತಿ, ‘‘ನಾನು ಬೀಡಿ ಕಟ್ಟುವುದರಿಂದ ವಾರಕ್ಕೆ 1 ಸಾವಿರ ರೂಪಾಯಿ ಸಿಗುತ್ತದೆ. ಅಲ್ಲದೆ ನನಗೆ ಅಂಗವಿಕಲ ಪಿಂಚಣಿ ಬರುತ್ತಿದೆ’’ ಎಂದು ಹೇಳಿದ್ದರು ಎಂದು ಅಧಿಕಾರಿ ನೆನಪಿಸಿಕೊಂಡಿದ್ದಾರೆ. ಆ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿದ ಅಧಿಕಾರಿ, ‘‘ಅವರು ಉತ್ತಮ ಹಣಕಾಸು ಹಿನ್ನೆಲೆ ಹೊಂದಿಲ್ಲ ಎಂಬುದು ನನಗೆ ಕಂಡು ಬಂತು’’ ಎಂದು ತಿಳಿಸಿದ್ದಾರೆ. ‘‘1 ಲಕ್ಷ ರೂಪಾಯಿಯನ್ನು ಮೊದಲು ಕಳುಹಿಸುವಂತೆ ಹಾಗೂ ಉಳಿದ ಹಣವನ್ನು ಮತ್ತೆ ಕಳುಹಿಸುವಂತೆ ನಾನು ಆ ವ್ಯಕ್ತಿಗೆ ಸಲಹೆ ನೀಡಿದೆ. ಆದರೆ, ಆತ ತನ್ನ ನಿರ್ಧಾರ ದೃಢ ಹಾಗೂ ಅಚಲ. ನಾನು ಎಲ್ಲ ಹಣವನ್ನು ಒಂದೇ ಬಾರಿ ವರ್ಗಾಯಿಸಲು ಬಯಸುತ್ತೇನೆ’’ ಎಂದು ಹೇಳಿರುವುದನ್ನು ಅಧಿಕಾರಿ ನೆನಪಿಸಿಕೊಂಡಿದ್ದಾರೆ.

ತನ್ನ ಹೆಸರನ್ನು ಬಹಿರಂಗಗೊಳಿಸುವುದಿಲ್ಲ ಎಂಬ ಭರವಸೆ ನೀಡುವಂತೆ ಆ ವ್ಯಕ್ತಿ ಅಧಿಕಾರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಹೆಸರು ಬಹಿರಂಗಗೊಳಿಸಿಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವ್ಯಕ್ತಿಯನ್ನು ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News