ಇಂದು ಕುಂಭಮೇಳದಲ್ಲಿ ಅಂತಿಮ ಶಾಹಿ ಸ್ನಾನ: ಗಂಗಾನದಿಯಲ್ಲಿ ಸಾಮೂಹಿಕ ಸ್ನಾನ ಮಾಡಿದ ಭಕ್ತರು

Update: 2021-04-27 08:57 GMT
ಸಾಂದರ್ಭಿಕ ಚಿತ್ರ

ಹರಿದ್ವಾರ: ದೇಶದಾದ್ಯಂತ ಕೋವಿಡ್‌ ಎರಡನೆ ಅಲೆಯು ತೀವ್ರ ಸ್ವರೂಪ ಪಡೆಯುತ್ತಿರುವಂತೆಯೇ ಕುಂಭಮೇಳಲ್ಲಿ ಇಂದು ಭಕ್ತರು ಅಂತಿಮ ಶಾಹಿ ಸ್ನಾನ ನೆರವೇರಿಸಿದರು. ಇಂದು ಬೆಳಗ್ಗೆ ಐದೂವರೆ ಗಂಟೆಯಿಂದ ಸ್ನಾನ ಪ್ರಾರಂಭವಾಗಿದ್ದು, ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು ಎಂದು ತಿಳಿದು ಬಂದಿದೆ.

ವಿವಿಧ ಘಾಟ್‌ ಗಳಲ್ಲಿ ಚೈತ್ರ ಪೂರ್ಣಿಮೆಯಂದು ಆಗಮಿಸಿದ ಭಕ್ತರು ಸಾಮೂಹಿಕ ಸ್ನಾನ ನೆರವೇರಿಸಿದರು. ಈಗಾಗಲೇ ಕುಂಭಮೇಳದಲ್ಲಿ ಭಾಗವಹಿಸಿದ್ದ ಹಲವರಿಗೆ ಕೋವಿಡ್‌ ಸೋಂಕು ತಗುಲಿದ್ದ ಕಾರಣ ಬಹುತೇಕ ಅಖಾಡದ ಸನ್ಯಾಸಿಗಳು ಕುಂಭಮೇಳದಿಂದ ಹಿಂದೆ ಸರಿದಿದ್ದರು. ನಿರಂಜನಿ ಅಖಾಡದ ಹಲವು ಸನ್ಯಾಸಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗ್ಗಿನ ಬ್ರಾಹ್ಮಿ ಮುಹೂರ್ತದ ವೇಳೆ ಸ್ನಾನ ಪ್ರಾರಂಭವಾಗಿದ್ದು, ರಿಂದ ೧೦೦ ಸನ್ಯಾಸಿಗಳಿಗೆ ಏಕಕಾಕಲದಲ್ಲಿ ಅವಕಾಶ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಬೆಳಗ್ಗಿನ ವೇಳೆ ಭಕ್ತರು ಸ್ನಾನ ಮಾಡಿದರೆ, 9:3೦ರ ಬಳಿಕ ಅಖಾಡಗಳಿಗೆ ಮಾತ್ರ ಸ್ನಾನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಕೋವಿಡ್‌ ಪರಿಸ್ಥಿತಿ ಹದಗೆಟ್ಟು ಹಲವಾರು ರಾಜ್ಯಗಳು ಲಾಕ್‌ ಡೌನ್ ಮೊರೆ ಹೋಗಿರುವ ಈ ಸಂದರ್ಭದಲ್ಲೂ ಕುಂಭಮೇಳ ನಡೆಸುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News