ಸಾವಿನ ಸಂಖ್ಯೆಯ ಕುರಿತು ಚರ್ಚಿಸುವುದರಿಂದ ಮೃತಪಟ್ಟವರು ವಾಪಸ್‌ ಬರುವುದಿಲ್ಲ ಎಂದ ಹರ್ಯಾಣ ಮುಖ್ಯಮಂತ್ರಿ

Update: 2021-04-27 14:16 GMT

ಚಂಡಿಗಡ,ಎ.27: ಒಟ್ಟಾರೆ ಸಂಖ್ಯೆಯನ್ನು ಮರೆಮಾಚಲು ತನ್ನ ಸರಕಾರವು ಕೋವಿಡ್ ಸಂಬಂಧಿತ ಸಾವುಗಳ ಅಂಕಿಸಂಖ್ಯೆಗಳನ್ನು ತಿರುಚುತ್ತಿದೆ ಎಂಬ ಆರೋಪಗಳನ್ನು ಅರ್ಥಹೀನ ಎಂದು ತಳ್ಳಿಹಾಕಿರುವ ಹರ್ಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು,ಈ ಸಂಕಷ್ಟದ ಸಮಯದಲ್ಲಿ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಗಮನವನ್ನು ಕೇಂದ್ರೀಕರಿಸಬೇಕು ಎಂದು ಹೇಳಿದ್ದಾರೆ.

‘ಇಂದು ನಾವಿರುವ ಸ್ಥಿತಿಯಲ್ಲಿ ಮಾಹಿತಿಗಳನ್ನು ತಿರುಚಲು ನಾವು ಬಯಸುತ್ತಿಲ್ಲ ’ಎಂದು ಸೋಮವಾರ ಹಿಸ್ಸಾರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಹಿಸ್ಸಾರ್ ಜಿಲ್ಲೆಯಲ್ಲಿ ಸೋಮವಾರ ಆಮ್ಲಜನಕ ಕೊರತೆಯಿಂದ ಸಂಭವಿಸಿದೆ ಎನ್ನಲಾಗಿರುವ ಐದು ಸಾವುಗಳನ್ನು ಪ್ರಸ್ತಾಪಿಸಿದ ಅವರು, ಲಭ್ಯ ಮೂಲಸೌಕರ್ಯಗಳ ಇತಿಮಿತಿಗಳನ್ನು ಪರಿಗಣಿಸಬೇಕಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆಯಲ್ಲಿ ಐವರು ಕೋವಿಡ್-19 ರೋಗಿಗಳು ಮೃತಪಟ್ಟಿದ್ದು,ಆಮ್ಲಜನಕದ ಕೊರತೆ ಸಾವುಗಳಿಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಆಡಳಿತವು ಮ್ಯಾಜ್ಟೀರಿಯಲ್ ತನಿಖೆಗೆ ಆದೇಶಿಸಿದೆ.

‘ಜನರು ಹೇಗೆ ಚೇತರಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ನಾವು ಗಮನ ಹರಿಸಬೇಕು. ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಸತ್ತವರನ್ನು ಮರಳಿ ತರಲು ಸಾಧ್ಯವಿಲ್ಲ. ಸಾವುಗಳ ಸಂಖ್ಯೆ ಕುರಿತು ಚರ್ಚೆಗಳಿಗೆ ಯಾವುದೇ ಅರ್ಥವಿಲ್ಲ ’ ಎಂದ ಖಟ್ಟರ್, ‘ಈ ಸಾಂಕ್ರಾಮಿಕದ ಬಗ್ಗೆ ನನಗೂ ಗೊತ್ತಿರಲಿಲ್ಲ,ನಿಮಗೂ ಗೊತ್ತಿರಲಿಲ್ಲ. ಈ ಸಂದರ್ಭದಲ್ಲಿ ನಾವು,ನೀವು,ರೋಗಿಗಳು ಸೇರಿದಂತೆ ಎಲ್ಲರ ಸಹಕಾರದ ಅಗತ್ಯವಿದೆ ’ ಎಂದರು.

ಹರ್ಯಾಣದಲ್ಲಿ ಸೋಮವಾರ 11,504 ಹೊಸ ಸೋಂಕು ಪ್ರಕರಣಗಳು ಮತ್ತು 75 ಸಾವುಗಳು ವರದಿಯಾಗಿವೆ. ತುಲನಾತ್ಮಕವಾಗಿ ತಮ್ಮನ್ನು ಉತ್ತಮ ಸ್ಥಿತಿಯಲ್ಲಿ ತೋರಿಸಿಕೊಳ್ಳಲು ಹಲವಾರು ರಾಜ್ಯಗಳು ಸಾವುಗಳ ಸಂಖ್ಯೆಗಳನ್ನು ಕಡಿಮೆಯಾಗಿ ವರದಿ ಮಾಡುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News