ಖಲಿಸ್ತಾನ್ ಉಗ್ರರ ವಿರುದ್ಧ ಎನ್ಐಎಯಿಂದ ಆರೋಪ ಪಟ್ಟಿ ಸಲ್ಲಿಕೆ
ಹೊಸದಿಲ್ಲಿ, ಎ. 26: ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳ ನಿರ್ದೇಶನದಂತೆ ಶೌರ್ಯಚಕ್ರ ಪ್ರಶಸ್ತಿ ಪುರಷ್ಕೃತ ಕಾಮ್ರೆಡ್ ಬಲ್ವಿಂದರ್ ಸಿಂಗ್ ಸಂಧು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಕಾನೂನು ಬಾಹಿರ ಸಂಘಟನೆ ಖಲಿಸ್ಥಾನ್ ಲಿಬರೇಶನ್ ಪೋರ್ಸ್ (ಕೆಎಲ್ಎಫ್)ನ 8 ಉಗ್ರರ ವಿರುದ್ಧ ಎನ್ಐಎ ಮಂಗಳವಾರ ಆರೋಪ ಪಟ್ಟಿ ಸಲ್ಲಿಸಿದೆ.
ಪಂಜಾಬ್ನಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಿದ್ದ ಸಂಧು ಅವರನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ತರಣ್ತರಣ್ ಜಿಲ್ಲೆಯಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಸಂಧು ಅವರನ್ನು ಕೆಎಲ್ಎಫ್ನ ಉಗ್ರರು ಗುಂಡು ಹಾರಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಮೊಹಾಲಿಯಲ್ಲಿರುವ ಎನ್ಐಎ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತು.
ಆರೋಪ ಪಟ್ಟಿಯಲ್ಲಿ ತರಣ್ ತರಣ್ ನ ಇಂದ್ರಜಿತ್ ಸಿಂಗ್, ಗುರುದಾಸ್ಪುರದ ಸುಖ್ರಾಜ್ ಸಿಂಗ್, ಸುಖ್ದೀಪ್ ಸಿಂಗ್, ಗುರ್ಜಿತ್ ಸಿಂಗ್ ಹಾಗೂ ಸುಖ್ಮಿತ್ ಪಾಲ್ ಸಿಂಗ್, ಲುಧಿಯಾನದ ರವೀಂದರ್ ಸಿಂಗ್ ಆಕಾಶ್ದೀಪ್ ಅರೋರಾ ಹಾಗೂ ಜಗರೂಪ್ ಸಿಂಗ್ ಮೊದಲಾದವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.