ಸರಕಾರಿ ಆ್ಯಂಬುಲೆನ್ಸ್ ನಲ್ಲಿ ಬಂದ ರೋಗಿಗಳಿಗೆ ಮಾತ್ರ ಚಿಕಿತ್ಸೆಗೆ ಅವಕಾಶ ಎಂಬ ಆದೇಶ ಹಿಂಪಡೆದ ಅಹ್ಮದಾಬಾದ್ ನಗರಪಾಲಿಕೆ

Update: 2021-04-29 18:25 GMT
ಸಾಂದರ್ಭಿಕ ಚಿತ್ರ 

ಗಾಂಧಿನಗರ, ಎ.29: ಸರಕಾರಿ ಆ್ಯಂಬುಲೆನ್ಸ್ನಲ್ಲಿ ಆಗಮಿಸುವ ಕೊರೋನ ವೈರಸ್ ರೋಗಿಗಳನ್ನು ಮಾತ್ರ ಚಿಕಿತ್ಸೆಗೆ ದಾಖಲಿಸಬೇಕು ಎಂಬ ನಿಯಮವನ್ನು ಗುಜರಾತ್ನ ಅಹ್ಮದಾಬಾದ್ ನಗರಪಾಲಿಕೆ ಬುಧವಾರ ರದ್ದುಗೊಳಿಸಿದೆ ಎಂದು ವರದಿಯಾಗಿದೆ. ಖಾಸಗಿ ವಾಹನಗಳಲ್ಲಿ ಆಗಮಿಸುವ ಕೊರೋನ ಸೋಂಕಿತರನ್ನು ಅಹ್ಮದಾಬಾದ್ನ ಹಲವು ನಿಯೋಜಿತ ಕೋವಿಡ್ ಆಸ್ಪತ್ರೆಗಳು ಚಿಕಿತ್ಸೆಗೆ ದಾಖಲಿಸಲು ನಿರಾಕರಿಸುತ್ತಿವೆ. 

ಆಟೋರಿಕ್ಷಾ, ಖಾಸಗಿ ವಾಹನ ಅಥವಾ ಖಾಸಗಿ ಆ್ಯಂಬುಲೆನ್ಸ್ಗಳಲ್ಲಿ ಆಗಮಿಸುವವರನ್ನು ಅಹ್ಮದಾಬಾದ್ ನಗರಪಾಲಿಕೆಯ ಅಧೀನದಲ್ಲಿರುವ 108 ಆ್ಯಂಬುಲೆನ್ಸ್ ಗಳಲ್ಲಿ ಬಂದರೆ ಮಾತ್ರ ಚಿಕಿತ್ಸೆಯ ಸರದಿ ನಿರ್ಧರಿಸಲಾಗುತ್ತಿದೆ ಎಂದು ಎಪ್ರಿಲ್ 26ರಂದು ‘ಸ್ಕ್ರಾಲ್.ಇನ್’ ವರದಿ ಮಾಡಿತ್ತು.

‘ಇದರಿಂದ ಸೋಂಕಿನ ತೀವ್ರತೆ ಹೆಚ್ಚಿರುವವರೂ 108 ಆ್ಯಂಬುಲೆನ್ಸ್ ಗಾಗಿ 10ರಿಂದ 11 ಗಂಟೆ ಕಾಯಬೇಕಾದ ಪರಿಸ್ಥಿತಿಯಿದೆ. ಅಲ್ಲದೆ ಅಹ್ಮದಾಬಾದ್ ನಗರದಲ್ಲಿ ಕೇವಲ 120 ಆ್ಯಂಬುಲೆನ್ಸ್ಗಳಿವೆ, ಆದರೆ ದಿನಾ ಸಾವಿರಾರು ಸೋಂಕಿತರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡ ಗುಜರಾತ್ ಹೈಕೋರ್ಟ್, ಆಸ್ಪತ್ರೆಗಳಿಗೆ ಆಗಮಿಸುವ ಎಲ್ಲಾ ಸೋಂಕಿತರನ್ನೂ ಚಿಕಿತ್ಸೆಗೆ ದಾಖಲಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ. 

ರಾಜ್ಯ ಸರಕಾರ ಅಥವಾ ಅಹ್ಮದಾಬಾದ್ ನಗರಪಾಲಿಕೆ ಯಾವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಹೇಳುವುದಿಲ್ಲ. ಆದರೆ ಕೆಲಸ ಮಾಡುವ ರೀತಿ ಸರಿಯಿಲ್ಲ ಮತ್ತು ಪಾರದರ್ಶಕವಾಗಿಲ್ಲ. ಆದ್ದರಿಂದಲೇ ಇಂತಹ ಸಮಸ್ಯೆ ತಲೆದೋರುತ್ತಿದೆ. ನಗರಪಾಲಿಕೆಯ ಅಧೀನದ ಆ್ಯಂಬುಲೆನ್ಸ್‌ ನಲ್ಲಿ ಬಾರದ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ವೈದ್ಯರು ಹೇಳುವಂತಿಲ್ಲ. ಯಾವ ವಾಹನದಲ್ಲಿ ಬಂದರು ಎಂಬುದನ್ನು ಪರಿಗಣಿಸದೆ ಎಲ್ಲರಿಗೂ ಚಿಕಿತ್ಸೆ ಒದಗಿಸಬೇಕು ಎಂದು ಹೈಕೋರ್ಟ್ ನ ವಿಭಾಗೀಯ ಪೀಠ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯಾವುದೇ ವಾಹನದಲ್ಲಿ ಬರುವ ರೋಗಿಗಳಿಗೆ, ಅವರ ಪರಿಸ್ಥಿತಿಯನ್ನು ಗಮನಿಸಿ ಆದ್ಯತೆಯ ಮೇರೆಗೆ ಚಿಕಿತ್ಸೆಗೆ ದಾಖಲಿಸಲು ನಿರ್ಧರಿಸಲಾಗಿದೆ ಎಂದು ನಗರಪಾಲಿಕೆ ತಿಳಿಸಿದೆ. 

ಅಲ್ಲದೆ, ಕೊರೋನ ಸೋಂಕಿತರಿಗೆ ಕನಿಷ್ಟ 75% ಹಾಸಿಗೆ ಮೀಸಲಿರಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ ಆಧಾರ್‌ ಕಾರ್ಡ್‌ ನಲ್ಲಿ ಅಹ್ಮದಾಬಾದ್ ನ ವಿಳಾಸವಿದ್ದರೆ ಮಾತ್ರ ಆಸ್ಪತ್ರೆಗಳಿಗೆ ದಾಖಲಿಸಲಾಗುವುದು ಎಂಬ ಆದೇಶವನ್ನೂ ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News