×
Ad

ಸಹಾಯ ಮಾಡಲು ಆಗುತ್ತಿಲ್ಲ, ದಿಲ್ಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು: ಆಪ್ ಶಾಸಕನ ವೀಡಿಯೋ ಸಂದೇಶ

Update: 2021-04-30 12:30 IST

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಕೋವಿಡ್ ಪರಿಸ್ಥಿತಿ ಬಿಗಡಾಯಿಸಿರುವ ನಡುವೆ ಆಡಳಿತ ಆಮ್ ಆದ್ಮಿ ಪಕ್ಷದ ಮತಿಯಾ ಮಹಲ್ ಕ್ಷೇತ್ರದ ಶಾಸಕ ಶೋಯೆಬ್ ಇಕ್ಬಾಲ್ ಅವರು ದಿಲ್ಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಆಗ್ರಹಿಸಿದ್ದಾರೆ.

ಕಳೆದ ವರ್ಷ  ವಿಧಾನಸಭಾ ಚುನಾವಣೆಗೆ ಒಂದು ತಿಂಗಳಿರುವಾಗ ಕಾಂಗ್ರೆಸ್ ಪಕ್ಷದಿಂದ ಇಕ್ಬಾಲ್ ಆಪ್‍ಗೆ  ವಲಸೆ ಬಂದಿದ್ದರು. ಈಗ  ವೀಡಿಯೋ ಸಂದೇಶವೊಂದನ್ನು ಬಿಡುಗಡೆಗೊಳಿಸಿ ದಿಲ್ಲಿಯಲ್ಲಿ ರಾಷ್ಟ್ರಪತಿ ಆಡಳಿತ ಅಗತ್ಯವೆಂದು ಅವರು ಹೇಳಿದ್ದಾರೆ. 

"ದಿಲ್ಲಿಯ ಪರಿಸ್ಥಿತಿಯಿಂದ ನನಗೆ ನೋವಾಗಿದೆ. ನನಗೆ ಬಹಳ ಚಿಂತೆಯಾಗಿದೆ, ನಿದ್ದೆ ಮಾಡಲು ಆಗುತ್ತಿಲ್ಲ. ಜನರಿಗೆ ಆಕ್ಸಿಜನ್ ಮತ್ತು ಔಷಧಿಗಳು ದೊರಕುತ್ತಿಲ್ಲ, ನನ್ನ ಸ್ನೇಹಿತ   ಕಷ್ಟದಲ್ಲಿದ್ದಾನೆ, ಆತ ಆಸ್ಪತ್ರೆಯಲ್ಲಿದ್ದಾನೆ ಆದರೆ ಆಕ್ಸಿಜನ್ ಅಥವಾ ವೆಂಟಿಲೇಟರ್ ದೊಕುತ್ತಿಲ್ಲ. ವೈದ್ಯರು ನೀಡಿದ ರೆಮ್ಡಿಸಿವಿರ್ ಪ್ರಿಸ್ಕ್ರಿಪ್ಶನ್ ನನ್ನ ಬಳಿ ಇದೆ ಆದರೆ ಅದನ್ನು ಎಲ್ಲಿಂದ ತರಲಿ? ಅವರ ಮಕ್ಕಳು ಅದಕ್ಕಾಗಿ ಅಲೆದಾಡುತ್ತಿದ್ದಾರೆ. ಇಂದು ಒಬ್ಬ ಶಾಸಕನೆಂದು ಕರೆಸಿಕೊಳ್ಳುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ, ಏಕೆಂದರೆ ನನಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. 

ಸರಕಾರ ಕೂಡ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ನಾನು ಆರು ಬಾರಿ ಶಾಸಕನಾಗಿ ಆಯ್ಕೆಯಾದವನು. ಅತ್ಯಂತ ಹಿರಿಯ ಶಾಸಕ. ಆದರೂ ಯಾರೂ ಸ್ಪಂದಿಸುತ್ತಿಲ್ಲ, ಯಾವುದೇ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಲು ಕೂಡ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ದಿಲ್ಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ನಾನು ದಿಲ್ಲಿ ಹೈಕೋರ್ಟಿಗೆ ಮನವಿ ಮಾಡಲು ಬಯಸುತ್ತೇನೆ. ಇಲ್ಲದೇ ಇದ್ದಲ್ಲಿ ರಸ್ತೆಯಲ್ಲಿ ಹೆಣಗಳೇ ಇರಲಿವೆ" ಎಂದು  ಅವರು ಹೇಳಿದ್ದಾರೆ.

ಹಿಂದೆ ಕಾಂಗ್ರೆಸ್ ಹೊರತಾಗಿ ಲೋಕ್ ಜನ ಶಕ್ತಿ, ಜನತಾ ದಳ, ಜೆಡಿ(ಎಸ್) ಹಾಗೂ ಜೆಡಿ(ಯು)ವಿನಲ್ಲೂ ಅವರು ಸಕ್ರಿಯರಾಗಿದ್ದರು. ಇಕ್ಬಾಲ್ ಅವರ ವೀಡಿಯೋ ಸಂದೇಶಕ್ಕೆ ಆಪ್ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News