ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ತನ್ನ ಆಟೋರಿಕ್ಷಾವನ್ನೇ ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದ ಜಾವೇದ್

Update: 2021-04-30 08:49 GMT

ಭೋಪಾಲ್: ಭೋಪಾಲದ ಆಟೋರಿಕ್ಷಾ ಚಾಲಕ ಜಾವೇದ್ ತಮ್ಮ ಆಟೋವನ್ನು ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ  ಉಚಿತವಾಗಿ ಸಾಗಿಸುವ ಮಾನವೀಯ ಕೈಂಕರ್ಯವನ್ನು ಈ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಗೊಂಡಿದ್ದಾರೆ. ಜಾವೇದ್ ಅವರು ಕಳೆದ 20 ದಿನಗಳಿಂದ ಈ ನಿಸ್ಸ್ವಾರ್ಥ ಸೇವೆಗೈಯ್ಯುತ್ತಿದ್ದು ಎಲ್ಲರ ಶ್ಲಾಘನೆಗೊಳಗಾಗಿದ್ದಾರಲ್ಲದೆ ಸಮಾಜಕ್ಕೆ ಮಾದರಿಯೂ ಆಗಿದ್ದಾರೆ.

ದೇಶಾದ್ಯಂತ ಅಂಬ್ಯುಲೆನ್ಸ್  ಕೊರತೆಯಿಂದ ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ಕಷ್ಟ ಪಡುತ್ತಿರುವ ಸುದ್ದಿಗಳನ್ನು ಕೇಳಿ ತಾವು ಇಂತಹ ಒಂದು ಸೇವೆ ಒದಗಿಸಲು ನಿರ್ಧರಿಸಿದ್ದಾಗಿ ಜಾವೇದ್ ಹೇಳುತ್ತಾರೆ.

ತಮ್ಮ ಪತ್ನಿಯ ಚಿನ್ನಾಭರಣ ಮಾರಿ ತಮ್ಮ ಆಟೋರಿಕ್ಷಾವನ್ನು ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದಾಗಿ ಅವರು ತಿಳಿಸುತ್ತಾರೆ. ಅವರ ಆಟೋದಲ್ಲಿ ಸ್ಯಾನಿಟೈಸರ್, ಆಕ್ಸಿಜನ್ ಸಿಲಿಂಡರ್, ಪಿಪಿಇ ಸೂಟ್ ಹಾಗೂ ಕೆಲ ಅಗತ್ಯ ಔಷಧಿಗಳೂ ಇವೆ.

ಆಕ್ಸಿಜನ್ ರೀಫಿಲ್ಲಿಂಗ್ ಸೆಂಟರಿನಲ್ಲಿ ಸರತಿಯಲ್ಲಿ ನಿಂತು ತಮ್ಮ ಆಟೋದಲ್ಲಿನ ಸಿಲಿಂಡರಿಗೆ ಆಕ್ಸಿಜನ್ ತುಂಬಿಸುತ್ತಿರುವುದಾಗಿ ಹೇಳುವ ಅವರು ನಗರದಲ್ಲಿ ಯಾರಾದರೂ ಅಂಬ್ಯುಲೆನ್ಸ್ ದೊರೆಯದೇ ಇದ್ದರೆ ತಮಗೆ ಕರೆ ಮಾಡಬಹುದು. ಗಂಭೀರ ಸ್ಥಿತಿಯಲ್ಲಿದ್ದ 9 ರೋಗಿಗಳನ್ನು ಇಲ್ಲಿಯ ತನಕ ತಮ್ಮ ಆಟೋ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿರುವುದಾಗಿಯೂ ಅವರು ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News