×
Ad

ತನ್ನ ಸ್ವಂತ ಖರ್ಚಿನಲ್ಲಿ 80 ಲಕ್ಷ ರೂ. ವೆಚ್ಚದ ಆಕ್ಸಿಜನ್‌ ಸ್ಥಾವರ ನಿರ್ಮಿಸಲಿರುವ ಅಲ್-ಶಿಫಾ ಆಸ್ಪತ್ರೆ

Update: 2021-04-30 15:45 IST

ಹೊಸದಿಲ್ಲಿ: ಕೋವಿಡ್ ನಾಗಾಲೋಟದಿಂದ ನಗರ ನಿವಾಸಿಗಳು ತತ್ತರಿಸುತ್ತಿದ್ದರೂ ರಾಜಧಾನಿ ದಿಲ್ಲಿಯ ಹಲವು ದೊಡ್ಡ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಮೆಡಿಕಲ್ ಆಕ್ಸಿಜನ್ ಸ್ಥಾವರಗಳ ಸ್ಥಾಪನೆಗೆ ಪಿಎಂ-ಕೇರ್ಸ್ ನಿಧಿಯನ್ನು ಎದುರು ನೋಡುತ್ತಿರುವ ಸಂದರ್ಭದಲ್ಲಿ  ಅಲ್ಲಿನ ಜಾಮಿಯಾ ನಗರ್ ಪ್ರದೇಶದಲ್ಲಿನ ಅಲ್-ಶಿಫಾ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ತನ್ನ ಸ್ವಂತ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಸ್ಥಾವರ ಹಾಗೂ 10,000 ಲೀಟರ್ ಸಾಮಥ್ರ್ಯದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್  ನಿರ್ಮಾಣವನ್ನು ಅಂದಾಜು ರೂ 80 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. 

ರಾಜಧಾನಿಯಲ್ಲಿ 2011ರಿಂದ ಕಾರ್ಯಾಚರಿಸುತ್ತಿರುವ ಈ ಆಸ್ಪತ್ರೆಯಲ್ಲಿ ಗರಿಷ್ಠ 49 ಕೋವಿಡ್ ರೋಗಿಗಳ ದಾಖಲಾತಿಗೆ ದಿಲ್ಲಿ ಆರೋಗ್ಯ ಇಲಾಖೆ ಅನುಮತಿ ನೀಡಿದೆ. ಸದ್ಯ ಆಸ್ಪತ್ರೆಯ ಎಲ್ಲಾ 40 ಬೆಡ್‍ಗಳು ತುಂಬಿವೆ.

ಇಲ್ಲಿಯ ತನಕ ಆಸ್ಪತ್ರೆಯಲ್ಲಿ 15 ಮಂದಿ ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ಸೋಂಕಿತರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದ್ದು ಅವರೆಲ್ಲರೂ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

"ಆಸ್ಪತ್ರೆಗೆ ಸಾಕಷ್ಟು ಆಕ್ಸಿಜನ್ ಲಭ್ಯವಾಗುವಂತಾಗಲು ನಾನು ಕೂಡ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ರಾತ್ರಿ ಕೂಡ 10ರಿಂದ 12 ಗಂಟೆಗಳ ಕಾಲ ಸರತಿ ನಿಂತಿದ್ದೇವೆ ಹಾಗೂ ಯಾವುದೇ ರೋಗಿ ಆಕ್ಸಿಜನ್ ಕೊರತೆಯಿಂದ ಬಳಲದಂತೆ ಮಾಡಿದ್ದೇವೆ, ಆದರೆ ಈಗ ದಿಲ್ಲಿ ಸರಕಾರ ನೋಡಲ್ ಅಧಿಕಾರಿಯನ್ನು ನೇಮಿಸಿರುವುದರಿಂದ ಅವರೇ ನಮ್ಮ ಜತೆ ಸಂಪರ್ಕದಲ್ಲಿದ್ದು ನಮಗೆ ಅಗತ್ಯವಿರುವಾಗ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳುತ್ತಾರೆ" ಎಂದು  ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಡಾ ಮೊಹಮ್ಮದ್ ಜಾವೇದ್ ಹೇಳಿದ್ದಾರೆ.

ಆಕ್ಸಿಜನ್ ಸ್ಥಾವರ ಮುಂದಿನ ನಾಲ್ಕು ವಾರಗಳಲ್ಲಿ ಕಾರ್ಯಾರಂಭಗೊಳ್ಳುವ ನಿರೀಕ್ಷೆಯಿದೆ, ಎಲ್‍ಎಂಒ ಟ್ಯಾಂಕ್ ನಿರ್ಮಾಣಕ್ಕೆ ಸದ್ಯದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಆಶ್ರಯದಲ್ಲಿ ಈ ಆಸ್ಪತ್ರೆ ಕಾರ್ಯಾಚರಿಸುತ್ತಿದ್ದು ಸಮುದಾಯದ ಸದಸ್ಯರ ದೇಣಿಗೆಗಳೇ ಇದಕ್ಕೆ ಆಧಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News