ಇತರರ ಅಸಹಾಯಕತೆ ಬಳಸಿ ಹಣ ಮಾಡಬಾರದು: ಆಮ್ಲಜನಕ ಪೂರೈಕೆದಾರರಿಗೆ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ, ಎ. 29: ದಿಲ್ಲಿಯಲ್ಲಿ ಆಮ್ಲಜನಕದ ಕೊರತೆ ಕುರಿತ ಮನವಿಯ ವಿಚಾರಣೆ ನಡೆಸಿದ ದಿಲ್ಲಿ ಉಚ್ಚ ನ್ಯಾಯಾಲಯ, ಇದು ರಾಜ್ಯ ಸರಕಾರದ ಸಂಪೂರ್ಣ ವಿಫಲತೆಯನ್ನು ತೋರಿಸಿದೆ ಎಂದು ಹೇಳಿದೆ ಹಾಗೂ ಆಮ್ಲಜನಕ ಒದಗಿಸುವ ಮೂಲಕ ಸಹಕರಿಸುವಂತೆ ಪೂರೈಕೆದಾರರಿಗೆ ಸೂಚಿಸಿದೆ.
ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಹಾಗೂ ರೇಖಾ ಪಳ್ಳಿ ಅವರನ್ನೊಳಗೊಂಡ ನ್ಯಾಯಪೀಠ, ‘‘ಈ ಸಂದರ್ಭ ನಾವು ಇತರರ ಅಸಹಾಯಕತೆ ಬಳಸಿ ಹಣ ಮಾಡಬಾರದು. ನಾವು ಸಹಾನುಭೂತಿ ಹಾಗೂ ಕಾಳಜಿ ತೋರಿಸಬೇಕು’’ ಎಂದು ಹೇಳಿತು. ‘‘ದಯವಿಟ್ಟು ಅರ್ಥ ಮಾಡಿಕೊಳ್ಳಿ, ಇದು ಯುದ್ದವಲ್ಲ. ನಾವು ಪ್ರತಿಯೊಬ್ಬರಿಗೂ ಸಹಕರಿಸುವ ಅಗತ್ಯ ಇದೆ’’ ಎಂದು ಅದು ಆಮ್ಲಜನಕ ಪೂರೈಕೆದಾರರಿಗೆ ತಿಳಿಸಿತು.
‘‘ನಾವು ಆಮ್ಲಜನಕ ಪೂರೈಕೆಯ ಎಲ್ಲಾ ದತ್ತಾಂಶವನ್ನು ದಿಲ್ಲಿ ಸರಕಾರಕ್ಕೆ ಪ್ರತಿನಿತ್ಯ ಸಲ್ಲಿಸುತ್ತಿದ್ದೇವೆ. ದಿಲ್ಲಿ ಸರಕಾರದ ಅಧಿಕಾರಿಗಳು ಪ್ರತಿ ದಿನ ನಮ್ಮ ಸ್ಥಾವರದಲ್ಲಿ ಉಪಸ್ಥಿತರಿರುತ್ತಾರೆ. ನಾವು ಅವರೊಂದಿಗೆ ಸಂಪೂರ್ಣ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ’’ ಎಂದು ಆಮ್ಲಜನಕ ಪೂರೈಕೆದಾರರು ನ್ಯಾಯಾಲಯಕ್ಕೆ ತಿಳಿಸಿದರು. ದಿಲ್ಲಿ ಪೊಲೀಸರು ಗುರುವಾರ ವಶಪಡಿಸಿಕೊಂಡ ಸುಮಾರು 170 ಆಮ್ಲಜನಕ ಸಾಂದ್ರಕಗಳನ್ನು ನ್ಯಾಯವಾದಿ ಸಚಿನ್ ಪುರಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಆಮ್ಲಜನಕದ ಸಾಂದ್ರಕಗಳನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತು.
ಕಾನೂನು ಕ್ರಮಗಳು ಮುಂದುವರಿಯುವುದಾದರೂ ಅಧಿಕಾರಿಗಳು ಯಾವುದೇ ವಿಳಂಬ ಮಾಡದೆ ಈ ಆಮ್ಲಜನಕದ ಸಾಂದ್ರಕಗಳನ್ನು ಬಿಡುಗಡೆ ಮಾಡುವುದು ಕಾಲದ ಅವಶ್ಯಕತೆ ಎಂದು ಪೀಠ ಹೇಳಿತು. ಆಮ್ಲಜನಕದ ಸಾಂದ್ರಕಗಳನ್ನು ಬಿಡುಗಡೆ ಮಾಡಲು ಕೂಡಲೇ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ರಾಜ್ಯ ಸರಕಾರಕ್ಕೆ ನಿರ್ದೇಶಿಸುತ್ತೇವೆ ಎಂದು ಪೀಠ ತಿಳಿಸಿತು.