ಆಮ್ಲಜನಕ ಬೇಕಿದ್ದರೆ, ಅರಳಿ ಮರದ ಅಡಿಯಲ್ಲಿ ಕುಳಿತುಕೊಳ್ಳಿ: ಉತ್ತರಪ್ರದೇಶದಲ್ಲಿ ಕೊರೋನ ರೋಗಿಗೆ ಪೊಲೀಸರ ಸಲಹೆ
ಪ್ರಯಾಗ್ರಾಜ್, ಎ. 29: ‘‘ನಿಮ್ಮ ಆಮ್ಲಜನಕದ ಮಟ್ಟವನ್ನು ಏರಿಸಲು ಅರಳಿ ಮರದ ಕೆಳಗೆ ಕುಳಿತುಕೊಳ್ಳಿ’’ ಎಂದು ಪೊಲೀಸರು ಆಮ್ಲಜನಕದ ಸಿಲಿಂಡರ್ಗಾಗಿ ಅಳುತ್ತಿರುವ ಕೊರೋನ ಸೋಂಕಿತೆ ಹಾಗೂ ಅವರ ಸಂಬಂಧಿಕರಿಗೆ ಹೇಳಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಶುಕ್ರವಾರ ನಡೆದಿದೆ.
ಆಮ್ಲಜನಕದ ಕೊರತೆ ಬಗ್ಗೆ ಪ್ರತಿಕ್ರಿಯಿಸಿರುವ ಓರ್ವ ಕೊರೋನ ಸೋಂಕಿತನ ಸಂಬಂಧಿ, ಜನರಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆಗೆ ಬರುವುದಕ್ಕಿಂತ ಮನೆಯಲ್ಲಿ ಇರಲು ಕೋರಲಾಗುತ್ತಿದೆ. ಆದರೆ, ನಮಗೆ ಮನೆಯಲ್ಲಿ ಕೂಡ ಆಮ್ಲಜನಕ ಬೇಕು. ಅಲ್ಲಿ ಯಾರೊಬ್ಬರೂ ಆಮ್ಲಜನಕ ಪೂರೈಸುವುದಿಲ್ಲ ಎಂದು ಅಳುತ್ತಾ ಹೇಳಿದ್ದಾರೆ. ಆಮ್ಲಜನಕದ ಸಿಲಿಂಡರ್ಗಾಗಿ ಕೊರೋನ ಸೋಂಕಿತರ ಸಂಬಂಧಿಕರು ಈಗ ಉತ್ತರಪ್ರದೇಶ ಸರಕಾರದ ಸುಪರ್ದಿಯಲ್ಲಿರುವ ಪ್ರಯಾಗ್ರಾಜ್ನ ಬಿಜೆಪಿ ಶಾಸಕ ಹರ್ಷವರ್ಧನ್ ವಾಜಪೇಯಿ ಅವರ ಆಮ್ಲಜನಕ ಸ್ಥಾವರದ ಮುಂದೆ ಜಮಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ನಿಯೋಜಿಸಲಾಗಿದೆ. ನಾವು ಎಲ್ಲಾ ಕಡೆ ಹೋದೆವು. ಅವರು ನಮ್ಮನ್ನು ದೂರ ಓಡಿಸುತ್ತಿದ್ದಾರೆ. ಆಸ್ಪತ್ರೆ ಹಾಗೂ ಆಮ್ಲಜನಕದ ಸ್ಥಾವರಗಳಲ್ಲಿ ‘ಆಮ್ಲಜನಕ ಇಲ್ಲ’ ಎಂಬ ಬೋರ್ಡ್ ಹಾಕಲಾಗಿದೆ. ಯಾರಲ್ಲಾದರೂ ಮಾತನಾಡಲು ಅವಕಾಶ ನೀಡಿ ಎಂದು ನಾನು ಬೇಡಿಕೊಂಡೆ. ಆದರೆ, ಪೊಲೀಸರು ನನ್ನನ್ನು ಓಡಿಸಿದರು ಎಂದು ಕೊರೋನ ಸೋಂಕಿಗೊಳಗಾಗಿ ಉಸಿರಾಡಲು ತೊಂದರೆ ಎದುರಿಸುತ್ತಿರುವ ತನ್ನ ತಂದೆಗಾಗಿ ಆಮ್ಲಜನಕ ಸಿಲಿಂಡರ್ಗೆ ಎದುರು ನೋಡುತ್ತಿರುವ ವ್ಯಕ್ತಿಯೋರ್ವ ಹೇಳಿದ್ದಾನೆ.
ಮೆಡಾಂಟ ಹಾಗೂ ಅಪೊಲ್ಲೊ ಆಸ್ಪತ್ರೆಗಳು ಸೇರಿದಂತೆ ಪ್ರಯಾಗ್ರಾಜ್ನಿಂದ ಲಕ್ನೋದ ವರೆಗಿನ ಎಲ್ಲಾ ಆಸ್ಪತ್ರೆಗಳಲ್ಲಿ ಅವರನ್ನು ದಾಖಲಿಸಲು ಪ್ರಯತ್ನಿಸಿದೆ. ಆದರೆ, ಯಾವೊಂದು ಆಸ್ಪತ್ರೆಯೂ ದಾಖಲಿಸಿಕೊಳ್ಳಲಿಲ್ಲ. ನಾವು ಎಲ್ಲಿಗೆ ಹೋಗಬೇಕು ಎಂದು ಇನ್ನೋರ್ವ ಕೊರೋನ ಸೋಂಕಿತನ ಅಸಹಾಯಕ ಸಂಬಂಧಿ ಹೇಳಿದ್ದಾರೆ. ‘‘ನಿನ್ನ ತಾಯಿಯನ್ನು ಕರೆದುಕೊಂಡು ಹೋಗಿ ಅರಳಿ ಮರದ ಅಡಿಯಲ್ಲಿ ಕುಳ್ಳಿರಿಸು ಎಂದು ಪೊಲೀಸ್ ಓರ್ವ ನನ್ನಲ್ಲಿ ಹೇಳಿದ್ದಾನೆ’’ ಎಂದು ಮತ್ತೋರ್ವ ಕೊರೋನ ಸೋಂಕಿತನ ಸಂಬಂಧಿ ಹೇಳಿದ್ದಾರೆ. ಕೊರೋನ ರೋಗಿಗಳು ಎದುರಿಸುತ್ತಿರುವ ಆಮ್ಲಜನಕದ ಕೊರತೆ ನಿವಾರಿಸಲು ಲಕ್ನೋ ಸೇರಿದಂತೆ ಉತ್ತರಪ್ರದೇಶದ 75 ಜಿಲ್ಲೆಗಳಲ್ಲಿ 47ಕ್ಕೂ ಅಧಿಕ ಜಿಲ್ಲೆಗಳಲ್ಲಿ ಪಿಎಂ ಕೇರ್ಸ್ ಅಡಿಯಲ್ಲಿ ವೈದ್ಯಕೀಯ ಆಮ್ಲಜನಕದ ಸ್ಥಾವರಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಉತ್ತರಪ್ರದೇಶ ಸರಕಾರ ಹೇಳಿಕೆ ನೀಡಿದ ದಿನಗಳ ಬಳಿಕ ಈ ಘಟನೆ ನಡೆದಿದೆ.