ಕೊರೋನ ಸೋಂಕಿಗೆ ಔಷಧಿ ಸೂಚಿಸಲು ಅನುಮತಿ ಕೋರಿ ಅರ್ಜಿ ಹಾಕಿದ್ದ ವ್ಯಕ್ತಿಗೆ ದಂಡ ವಿಧಿಸಿದ ಸುಪ್ರೀಂಕೋರ್ಟ್

Update: 2021-04-30 17:20 GMT

ಹೊಸದಿಲ್ಲಿ, ಎ.30: ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ತನಗೆ ಕೋವಿಡ್-19 ಸೋಂಕಿಗೆ ಔಷಧಿ ಸೂಚಿಸಲು ಅನುಮತಿ ನೀಡಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಯೊಬ್ಬನನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಆತನಿಗೆ 1,000 ರೂ. ದಂಡ ವಿಧಿಸಿದೆ.

ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುರೇಶ್ ಶಾ ಎಂಬವರು ತಾನು ಕೊರೋನ ಸೋಂಕಿನ ಬಗ್ಗೆ ಸಂಶೋಧನೆ ನಡೆಸಿದ್ದು ಔಷಧಿಯ ಬಗ್ಗೆ ತಿಳಿದುಕೊಂಡಿದ್ದೇನೆ. ಜನರಿಗೆ ಔಷಧಿ ಸೂಚಿಸಲು ಅನುಮತಿ ನೀಡಬೇಕು ಎಂದು ಕೋರಿ ಕಲ್ಕತಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಹೈಕೋರ್ಟ್ ತಳ್ಳಿಹಾಕಿದ ಬಳಿಕ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. 

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎನ್.ವಿ ರಮಣ ಅವರಿದ್ದ ನ್ಯಾಯಪೀಠ ‘ಇದೊಂದು ನಿಷ್ಪ್ರಯೋಜಕ ಅರ್ಜಿ. ನೀವೇನು ವೈದ್ಯರಾ ಅಥವಾ ವಿಜ್ಞಾನಿಯಾ? ನಿಮ್ಮ ವಿದ್ಯಾರ್ಹತೆಯೇನು? ಎಂದು ಅರ್ಜಿದಾರ ಸುರೇಶ್ ಶಾರನ್ನು ಪ್ರಶ್ನಿಸಿತು. ತಾನು ವೈದ್ಯನಲ್ಲ. ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವೀಧರ. ಆದರೆ ಸಂಶೋಧನೆ ನಡೆಸುವುದು ತನ್ನ ಹವ್ಯಾಸ ಎಂದು ಶಾ ಉತ್ತರಿಸಿದರು.

ವೈದ್ಯರಿಗೆ ಔಷಧ ಸೂಚಿಸಲು ತಿಳಿದಿಲ್ಲ. ಆದ್ದರಿಂದ ನೀವು ಔಷಧ ಬರೆದು ಕೊಡಲು ಬಯಸುತ್ತೀರಾ? ವಾಣಿಜ್ಯ ಪದವೀಧರನೊಬ್ಬ ಕೋವಿಡ್ ಸೋಂಕಿನ ಬಗ್ಗೆ ವೈದ್ಯರಿಗೆ ಮತ್ತು ವಿಜ್ಞಾನಿಗಳಿಗೆ ಪಾಠ ಹೇಳುತ್ತಿದ್ದಾರೆ ಎಂದು ತೀವ್ರವಾಗಿ ತರಾಟೆಗೆತ್ತಿಕೊಂಡ ಸುಪ್ರೀಂಕೋರ್ಟ್, ನಿಮಗೆ 10 ಲಕ್ಷದ ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಸೂಚಿಸಿತು.

ತಾನೊಬ್ಬ ನಿರುದ್ಯೋಗಿ ಶಿಕ್ಷಕ. 10 ಲಕ್ಷ ದಂಡ ಪಾವತಿಸಲು ಸಾಧ್ಯವಾಗದು. 1,000 ರೂ. ದಂಡ ಪಾವತಿಸುತ್ತೇನೆ ಎಂದು ಸುರೇಶ್ ಶಾ ವಿನಂತಿಸಿದರು. ದಂಡವನ್ನು ಕೊಲ್ಕತಾ ಹೈಕೋರ್ಟ್‌ ಗೆ ಪಾವತಿಸುವಂತೆ ತಿಳಿಸಿದ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News