×
Ad

11 ಕೋ.ಡೋಸ್ ಕೋವಿಶೀಲ್ಡ್ ಲಸಿಕೆಗಾಗಿ ಸರಕಾರದಿಂದ 1,732 ಕೋ.ರೂ.ಸಂದಾಯವಾಗಿದೆ: ಎಸ್‌ಐಐ ಸ್ಪಷ್ಟನೆ

Update: 2021-05-03 22:23 IST

ಹೊಸದಿಲ್ಲಿ,ಮೇ 3: ಮೇ,ಜೂನ್ ಮತ್ತು ಜುಲೈ ತಿಂಗಳುಗಳಿಗಾಗಿ 11 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಯ ಪೂರೈಕೆಗಾಗಿ ಪುಣೆಯ ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ಕ್ಕೆ ಎ.28ರಂದು 1,732.50 ಕೋ.ರೂ.ಗಳ ಶೇ.100 ಮುಂಗಡ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂಬ ಕೇಂದ್ರ ಸರಕಾರದ ಹೇಳಿಕೆಯನ್ನು ಕಂಪನಿಯು ಸೋಮವಾರ ಟ್ವಿಟರ್‌ನಲ್ಲಿ ದೃಢಪಡಿಸಿದೆ.

‘ಸರಕಾರದ ಹೇಳಿಕೆಯನ್ನು ನಾವು ಒಪ್ಪಿಕೊಳ್ಳುತ್ತಿದ್ದೇವೆ. ಕಳೆದೊಂದು ವರ್ಷದಿಂದ ನಾವು ಸರಕಾರದೊಂದಿಗೆ ನಿಕಟವಾಗಿ ಕಾರ್ಯಾಚರಿಸುತ್ತಿದ್ದೇವೆ ಮತ್ತು ಅದರ ಬೆಂಬಲಕ್ಕಾಗಿ ಋಣಿಯಾಗಿದ್ದೇವೆ. ಪ್ರತಿಯೊಂದೂ ಜೀವವನ್ನು ರಕ್ಷಿಸಲು ನಮ್ಮ ಲಸಿಕೆ ಉತ್ಪಾದನೆಯ ವೇಗವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ ’ಎಂದು ಎಸ್‌ಐಐ ಟ್ವೀಟಿಸಿದೆ.

ಕೋವಿಶೀಲ್ಡ್ ಲಸಿಕೆಗಾಗಿ ಸರಕಾರವು ಎಸ್‌ಐಐಗೆ ಹೊಸ ಬೇಡಿಕೆಗಳನ್ನು ಸಲ್ಲಿಸಿಲ್ಲ ಎಂಬ ಆರೋಪಗಳನ್ನು ಕೇಂದ್ರ ಗೃಹ ಸಚಿವಾಲಯವು ತಿರಸ್ಕರಿಸಿದ ಬಳಿಕ ಕಂಪನಿಯ ಈ ಸ್ಪಷ್ಟನೆ ಹೊರಬಿದ್ದಿದೆ.

11 ಕೋ.ಡೋಸ್ ಲಸಿಕೆಗಾಗಿ 1732.50 ಕೋ.ರೂ.ಗಳ ಪೂರ್ಣ ಮೊತ್ತವನ್ನು ತಾನು ಪಾವತಿಸಿದ್ದು,ಮೂಲದಲ್ಲಿ ತೆರಿಗೆ ಕಡಿತದ ಬಳಿಕ 1699.50 ಕೋ.ರೂ.ಗಳನ್ನು ಎಸ್‌ಐಐ ಎ.28ರಂದೇ ಸ್ವೀಕರಿಸಿದೆ ಎಂದು ಆರೋಗ್ಯ ಸಚಿವಾಲಯವು ಈ ಮೊದಲು ಹೇಳಿತ್ತು.

10 ಕೋ.ಡೋಸ್ ಕೋವಿಶೀಲ್ಡ್ ಲಸಿಕೆಯ ಪೂರೈಕೆಗಾಗಿ ಸಲ್ಲಿಸಿದ್ದ ಹಿಂದಿನ ಬೇಡಿಕೆಯಡಿ ಮೇ 3ರವರೆಗೆ 8.744 ಕೋ.ಡೋಸ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿರುವ ಸಚಿವಾಲಯವು,ಕೇಂದ್ರವು ಕೋವಿಡ್-19 ಲಸಿಕೆಗಳಿಗಾಗಿ ಯಾವುದೇ ಹೊಸ ಬೇಡಿಕೆಗಳನ್ನು ಸಲ್ಲಿಸಿಲ್ಲ ಎಂದು ಆರೋಪಿಸಿರುವ ಮಾಧ್ಯಮಗಳ ವರದಿಗಳು ತಪ್ಪು ಮತ್ತು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದೆ. ಜೊತೆಗೆ ಮೇ-ಜೂನ್ ನಡುವಿನ ಅವಧಿಯಲ್ಲಿ ಐದು ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆಯ ಪೂರೈಕೆಗಾಗಿ 787.50 ಕೋ.ರೂ.(ಮೂಲದಲ್ಲಿ ತೆರಿಗೆ ಕಡಿತದ ಬಳಿಕ 772.50 ಕೋ.ರೂ.)ಗಳನ್ನು ಹೈದರಾಬಾದ್‌ನ ಭಾರತ ಬಯೋಟೆಕ್‌ಗೆ ಎ.28ರಂದೇ ಬಿಡುಗಡೆ ಮಾಡಲಾಗಿದ್ದು,ಕಂಪನಿಯು ಅದೇ ದಿನ ಹಣವನ್ನು ಸ್ವೀಕರಿಸಿದೆ ಎಂದು ಅದು ಹೇಳಿದೆ. ಎರಡು ಕೋ.ಡೋಸ್ ಕೋವ್ಯಾಕ್ಸಿನ್ ಲಸಿಕೆಗಾಗಿ ಹಿಂದೆ ಸಲ್ಲಿಸಿದ್ದ ಬೇಡಿಕೆಯಡಿ ಮೇ 3ರವರೆಗೆ 0.8813 ಕೋ.ಡೋಸ್ ಲಸಿಕೆ ಪೂರೈಕೆಯಾಗಿದೆ ಎಂದು ಅದು ತಿಳಿಸಿದೆ.

ಮೇ 2ಕ್ಕೆ ಇದ್ದಂತೆ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 16.54 ಕೋ.ಗೂ ಅಧಿಕ ಲಸಿಕೆ ಡೋಸ್‌ಗಳನ್ನು ಉಚಿತವಾಗಿ ಒದಗಿಸಿದೆ ಮತ್ತು ಅವುಗಳ ಬಳಿ ಈಗಲೂ ನೀಡಲು 78 ಲ.ಕ್ಕೂ ಅಧಿಕ ಡೋಸ್‌ಗಳು ಲಭ್ಯವಿವೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನು 56 ಲ.ಡೋಸ್‌ಗೂ ಅಧಿಕ ಲಸಿಕೆಗಳನ್ನು ಪೂರೈಸಲಾಗುವುದು ಎಂದು ಸಚಿವಾಲಯವು ತಿಳಿಸಿದೆ. ಕೇಂದ್ರವು ಲಸಿಕೆ ಕಂಪನಿಗಳ ಮಾಸಿಕ ಉತ್ಪಾದನೆಯ ಶೇ.50ರಷ್ಟನ್ನು ಖರೀದಿಸಿ ರಾಜ್ಯ ಸರಕಾರಗಳಿಗೆ ಉಚಿತವಾಗಿ ಒದಗಿಸುವುದನ್ನು ಮುಂದುವರಿಸಲಿದೆ ಎಂದೂ ಅದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News