'ಕೋವಿಡ್ ಸೋಂಕಿತರಲ್ಲಿ ಆಕ್ಸಿಜನ್ ಮಟ್ಟ ಹೆಚ್ಚಿಸುವ ಉಪಾಯಗಳು' ಎಂಬ ನಕಲಿ ಸಂದೇಶಗಳಿಗೆ ಬಲಿಯಾಗದಿರಿ

Update: 2021-05-04 09:39 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆ ತನ್ನ ರುದ್ರನರ್ತನ ಮುಂದುವರಿಸಿದೆ. ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿರುವುದು ಹಲವೆಡೆ ಮುಂದುವರಿದಿದೆ. ಇದೇ ಸಮಯ ಕೋವಿಡ್ ಸೋಂಕಿತರ ಆಕ್ಸಿಜನ್ ಮಟ್ಟ ಕುಸಿದಾಗ ಏನು ಮಾಡಬೇಕೆಂಬ ಕುರಿತಂತೆ ಹಲವಾರು ದಾರಿ ತಪ್ಪಿಸುವ ಹೇಳಿಕೆಗಳು ಕೆಲವರಿಂದ ಬರುತ್ತಿವೆ.

ನೆಬುಲೈಸರ್‍ನಿಂದ ಆಕ್ಸಿಜನ್ ಪೂರೈಕೆ ಸಾಧ್ಯವಿಲ್ಲ:

ಆಕ್ಸಿಜನ್ ಸಿಲಿಂಡರ್ ಬದಲು ನೆಬುಲೈಸರ್ ಬಳಕೆ ಮಾಡಬಹುದು ಎಂದು ವೈದ್ಯರೊಬ್ಬರು ಹೇಳಿಕೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರ ಬಳಕೆ ಕುರಿತು ಆ ವ್ಯಕ್ತಿ ಹಿಂದಿಯಲ್ಲಿ ವಿವರಿಸುತ್ತಾ “ನಮ್ಮ ಪರಿಸರದಲ್ಲಿ ಸಾಕಷ್ಟು ಆಕ್ಸಿಜನ್  ಇದೆ ಹಾಗೂ ಅದನ್ನು ಇದು(ನೆಬುಲೈಸರ್) ನೀಡುತ್ತದೆ.'' ಎಂದು ಹೇಳುತ್ತಾರೆ ನೆಬುಲೈಸರ್ ಮೂಲಕ ಆಕ್ಸಿಜನ್ ಸೆಳೆಯಬಹುದು ಎಂದೂ  ಆತ ಹೇಳುತ್ತಾನೆ.

ಈ ಪೋಸ್ಟ್ ನಲ್ಲಿ ಹೆಸರಿಸಲಾಗಿರುವ ಆಸ್ಪತ್ರೆ ದಿಲ್ಲಿ ಸಮೀಪವಿದ್ದು, ಈ ವೈದ್ಯರ ಹೇಳಿಕೆಯಿಂದ ದೂರ ಸರಿದಿದೆಯಲ್ಲದೆ ನೆಬುಲೈಸರ್ ಆಕ್ಸಿಜನ್ ಸಿಲಿಂಡರ್‍ಗೆ ಪರ್ಯಾಯವೆಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ ಎಂದು ಹೇಳಿದೆ. ಹಲವಾರು ತಜ್ಞರು ಕೂಡ ಇದೇ ಮಾತನ್ನು ಹೇಳಿದ್ದಾರೆ.

ತರುವಾಯ ಆ ವೈದ್ಯ ಇನ್ನೊಂದು ಪೋಸ್ಟ್‍ನಲ್ಲಿ ತಮ್ಮನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೊಂಡಿದ್ದಾರೆ ಹಾಗೂ ಆಕ್ಸಿಜನ್ ಸಿಲಿಂಡರ್‍ಗೆ ನೆಬುಲೈಸರ್ ಪರ್ಯಾಯ ಎಂದು ಹೇಳಿಲ್ಲ ಎಂದಿದ್ದಾರೆ ಆದರೆ ಹೆಚ್ಚಿನ ವಿವರಣೆ ನೀಡಿಲ್ಲ.

ಆದರೆ ಮೊದಲ ವೀಡಿಯೋ ಈಗಲೂ ಹರಿದಾಡುತ್ತಿದ್ದು, ಹಾಗೂ ಈ ವೀಡಿಯೋದ ಸ್ಕ್ರೀನ್ ಶಾಟ್ ಪ್ರಧಾನಿ ಮೋದಿಯ ಇತ್ತೀಚಿಗಿನ ‘ಮನ್ ಕಿ ಬಾತ್‍’ನಲ್ಲೂ ಕಾಣಿಸಿಕೊಂಡಿತ್ತಲ್ಲದೆ “ಹಲವಾರು ವೈದ್ಯರು  ಮಾಹಿತಿಯ್ನು ಸಾಮಾಜಿಕ ಜಾಲತಾಣಗಳಲ್ಲಿ ನೀಡುತ್ತಿದ್ದಾರೆ,'' ಎಂದು ಅವರು ಹೇಳಿದ್ದರು. ಆದರೆ ವೈದ್ಯರ ಹೇಳಿಕೆಯ ಆಡಿಯೋ ಕೇಳಿಸಲಾಗಿರಲಿಲ್ಲ.

ಔಷಧೀಯ ಸಸ್ಯಗಳು ಕೆಲಸ ಮಾಡದು ಮತ್ತು ಅಪಾಯಕಾರಿಯಾಗಬಹುದು:

ಕೆಲ ಔಷಧೀಯ ಸಸ್ಯಗಳು ಕಡಿಮೆ ಆಕ್ಸಿಜನ್ ಮಟ್ಟ ಹೊಂದಿರುವ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಹಕಾರಿ ಎಂಬರ್ಥದ ಸಂದೇಶಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂತಹ ಒಂದು ‘ಪರಿಹಾರ'ದಲ್ಲಿ ಕರ್ಪೂರ, ಲವಂಗ, ಓಮ ಹಾಗೂ ನೀಲಗಿರಿ ಎಣ್ಣೆಯ ಮಿಶ್ರಣ ದೇಹದ ಆಕ್ಸಿಜನ್ ಮಟ್ಟ ಕಾಪಾಡುವಲ್ಲಿ ಸಹಕಾರಿ ಎಂದು ತಿಳಿಸಲಾಗಿತ್ತು. ಆಯುರ್ವೇದ ವೈದ್ಯರೊಬ್ಬರು ಈ ಮಿಶ್ರಣದ ಕುರಿತು ವಿವರಿಸುವ ವೀಡಿಯೋ ಫೇಸ್ ಬುಕ್ ಹಾಗೂ ವಾಟ್ಸ್ಯಾಪ್‍ನಲ್ಲಿ ಹರಿದಾಡುತ್ತಿದೆ. ಉದಾಹರಣೆಗೆ ಚರ್ಮದ ಕ್ರೀಮ್ ಮತ್ತು ಮುಲಾಮುಗಳ ತಯಾರಿಗೆ ಬಳಸಲಾಗುವ ಕರ್ಪೂರದ ಎಣ್ಣೆ ಸೇವಿಸಿದರೆ ಅದು ಹಾನಿಕರವಾಗಬಹುದು. ಅಷ್ಟೇ ಏಕೆ ಅಮೆರಿಕಾದ ಸಿಡಿಜಿ ಕೂಡ ಕರ್ಪೂರದ ಆವಿಯನ್ನು ಸೇವಿಸುವುದು ಕೂಡ ವಿಷಕಾರಕ ಎಂದು ಹೇಳಿದೆ.

ನಿಂಬೆ ಹಣ್ಣು ಕೂಡ ಉತ್ತರವಲ್ಲ

ಇತ್ತೀಚೆಗೆ ಹಿರಿಯ ರಾಜಕಾರಣಿ ಹಾಗೂ ಉದ್ಯಮಿ ವಿಜಯ್ ಸಂಕೇಶ್ವರ್ ಅವರು ಮೂಗಿಗೆ ಎರಡು ಹನಿ ನಿಂಬೆ ರಸ ಸುರಿದರೆ ದೇಹದ ಆಮ್ಲಜನಕ ಪ್ರಮಾಣ ಹೆಚ್ಚಾಗಬಹುದು ಎಂದಿದ್ದರು. ಈ ಸಲಹೆಯನ್ನು ತಮ್ಮ ಸಹೊದ್ಯೋಗಿಗಳಿಗೆ ನೀಡಿದ್ದಾಗಿ ಹಾಗೂ ಕಡಿಮೆ ಆಕ್ಸಿಜನ್ ಮಟ್ಟ ಇದ್ದ ಅವರಲ್ಲಿ ಅರ್ಧ ಗಂಟೆಯಲ್ಲಿ ಆಕ್ಸಿಜನ್ ಮಟ್ಟ ಏರಿಕೆಯಾಗಿತ್ತು ಎಂದಿದ್ದರು.

ಆದರೆ ನಿಂಬೆ ರಸದಿಂದ ಆಕ್ಸಿಜನ್ ಮಟ್ಟ ಏರಿಕೆಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ.

ಉಸಿರಾಟದ ವ್ಯಾಯಾಮ ಕೂಡ ಸಹಕಾರಿಯಲ್ಲ

ಯೋಗಗುರು ಬಾಬಾ ರಾಮದೇವ್ ಅವರ ಉಸಿರಾಟದ ವ್ಯಾಯಾಮ ಮೂಲಕ ರಕ್ತದಲ್ಲಿನ ಆಕ್ಸಿಜನ್ ಮಟ್ಟ ಏರಿಸಬಹುದು ಎಂದು ತೋರಿಸುವ ವೀಡಿಯೋವನ್ನು ಯುಟ್ಯೂಬಿನಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಆದರೆ ರಕ್ತದಲ್ಲಿನ ಆಕ್ಸಿಜನ್ ಮಟ್ಟ ಕುಸಿದಾಗ  ಮೆಡಿಕಲ್ ಆಕ್ಸಿಜನ್ ಪೂರೈಕೆ ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಹೇಳಿದೆ.

ಕೃಪೆ: bbc.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News